ಪಶ್ಚಿಮ ಘಟ್ಟಗಳ ಮಾಯಾಲೋಕದಿಂದ ಪೂರ್ವ ಘಟ್ಟಗಳ ಬಂಡೆಗಾಡುಗಳವರೆಗೆ ನನ್ನ ಪಯಣ..
ಗತಿಸಿಹೋದ ಘಟನೆಗಳನ್ನು ಮೆಲಕು ಹಾಕುತ್ತ..
ಸತೀಶ ಗಣೇಶ ನಾಗಠಾಣ.
ಮುಂದುವರೆದ ಭಾಗ...
ಸೂರ್ಯಾಸ್ತದ ವಿಹಂಗಮ ನೋಟ. ಕೃಷ್ಣಾ ನದಿ-ಆಂದ್ರ ಪ್ರದೇಶ. © ಅಂಕುರ್ ಸಿಂಗ ಚವ್ಹಾಣ.
ನುಗು ಅಭಯಾರಣ್ಯ ವ್ಯಾಪ್ತಿಯಲ್ಲಿ ಒಂದಿನ ನಾನು ಮತ್ತು ಗಣೇಶ (ಕ್ಷೇತ್ರ ಸಹಾಯಕ) ಲೈನ ನಡಿಯೋಕೆ ತಯ್ಯಾರಾಗಿ ನಿಂತವೀ. ರೀ ಸತೀಶ ಅರ್ಧ ಲೈನ ಅದ ಸಾವಕಾಶ ಹೋಗಿ ಸೈಟಿಂಗ್ ಮಾಡಕೊಂಡು ಬನ್ನಿರಿ ಅಂತ ಒಮ್ಮೇಲೆ ಕಟ್ಟು ನಿಟ್ಟಾಗಿ ಹೇಳಿದರು. ಆಯಿತು, ಅಂತ ದೇಶ ಕಾಯೋ ಸೈನಿಕರ ತರಹ ಸಜ್ಜಾಗಿ ಹೊರಟು ನಿಂತೆವು. ಹೆಗಲಿಗೆ ಒಂದು ಬ್ಯಾಗ, ಅದರಲ್ಲಿ ಒಂದು ಲೀಟರ ನೀರಿನ ಬಾಟಲಿ, ಪೆನ್ನು, ದಿಕ್ಸೂಚಿ, ಲಕ್ಷ್ಯ ದೂರ ಮಾಪಕ (Range Finder), ದಾಖಲೆಗಳನ್ನು ನಮೂದಿಸಿಕೊಳ್ಳಲು ಬೇಕಾದ ಡಾಟಾ ಶೀಟ್ ಹಾಕಿಕೊಂಡು ಜೀಪಲ್ಲಿ ಹೋಗಿ ಕುಳಿತುಕೊಂಡೆವು. ಬೆಳಗಿನ ಸಮಯ ನಮ್ಮ ಜೊತೆಗಾರರು ನಮ್ಮನ್ನ ಜೀಪಿನಲ್ಲಿ ಕರೆದುಕೊಂಡು ಸರಿಯಾದ ಸಮಯಕ್ಕೆ ನಮ್ಮನ್ನ ಆ ಸ್ಥಳಕ್ಕೆ ತಂದು ಬಿಟ್ಟರು. ರೀ... ಇದೇ ನೋಡರಿ ನಿಮ್ಮ ಡ್ರಾಪ್ ಪಾಯಿಂಟ್ ಅಂತ ಹೇಳುತ್ತಾ.. ಹೂಂ... ಕೈಗಡಿಯಾರವನ್ನ ನೋಡಿ ಇನ್ನು ಟೈಮ ಇದೆ. ನಿಧಾನವಾಗಿ ಹೋಗಿ ಲೈನ ನಡಿಯೋಕೆ ಶುರುಮಾಡಿ ಇವತ್ತು ಕೊನೆ ದಿನ ಅಂತ ಹುಮ್ಮಸ್ಸಿನಿಂದ ‘ಗುಡ್ ಲಕ್ ಬಾಯ್ಸ್' ಇವತ್ತು ಚೆನ್ನಾಗಿ ಸೈಟಿಂಗ ಮಾಡಿ ಅಂತ ಹೇಳಿ ‘ಪಟಾರ’ ಅಂತ ಜೀಪ ತಿರುಗಿಸಿ ಹಿಂಬದಿಯಿಂದ ಟಾಟಾ ಮಾಡಿ ಹೋಗೆ ಬಿಟ್ಟರು. ಹೋದ ರಭಸದಲ್ಲಿ ಜೀಪಿನ ಧೂಳು ನಮ್ಮ ಮುಖಕ್ಕೆ ಮೆತ್ತಿ ಕೊಂಡಿತ್ತು.. ಕಣ್ಣಲ್ಲಿ ಹೊಕ್ಕ ಧೂಳನ್ನ ಒರೆಸುತ್ತಾ ಒಂದು ಕಡೆ ನಿಂತು ಕಣ್ಣು ಉಜ್ಜುತ್ತಾ.... ಛೇ! ಈ ಧೂಳಿಗಿಷ್ಟು ಬೆಂಕಿ ಹಾಕಾ ಅಂತ ಬೈತಾ ತರೆದ ಅರ್ಧ ಕಣ್ಣಲ್ಲಿ ನೋಡುತ್ತಾ ರೀ..
ಗಣೇಶಾ ಇದೇನು ನನಗೆ ಕಾಡು ಅಂತ ಅನ್ನಸ್ತಾ ಇಲ್ಲಾರೀ. ಇಲ್ಲಿ ನೋಡಿದರೆ ಗದ್ದೆಯಲ್ಲಿ ರೈತ ಉಳಿಮೆ ಮಾಡ್ತಾ ಇದ್ದಾನೆ. ಇದು ಒಂಥರಾ ಅರ್ಧ ಊರು ಇನ್ನ ಅರ್ಧ ಕಾಡು ತರಹ ಕಾಣ್ತಾ ಇದೆ. ಇವರು ನೋಡಿದರೆ ಸೈಟಿಂಗ್ ಮಾಡಕೊಂಡು ಬನ್ನಿ ಅಂತ ಹೇಳ್ತಾ ಇದ್ದಾರೆ. ಇಲ್ಲಿ ದನ, ಮೇಕೆ ಒಟ್ಟೊಟ್ಟಾಗಿ ಹುಲ್ಲು ಮೇಯ್ತಾ ಇವೆ. ಬನ್ನಿ, ಇವತ್ತು ನಮ್ಮ ‘ನಸಿಬ’ನಲ್ಲಿ ದನ, ಮೇಕೆನ ನೋಡಕೊಂಡು ಬರೋಣಾ ಅಂತ ಹೇಳ್ತಾ ಹೊರಟೇವು. ದಾರಿ ಮಧ್ಯದಲ್ಲಿರುವ ಸೌರ ಶಕ್ತಿಯುತ ಸೋಲಾರ ಬೇಲಿಗಳನ್ನ ನಿಧಾನವಾಗಿ ದಾಟ್ತಾ ಇದ್ವೀ.. ಕೈಯಲ್ಲಿ ಕಟ್ಟಿಗೆಯ ಎರಡು ತುಂಡುಗಳನ್ನ ಹಿಡಿದು ಬೇಲಿಗಳನ್ನ ಅಗಲ ಮಾಡಿ ಒಳ ಹೋಗಲು ದಾರಿ ಮಾಡುವಷ್ಟರಲ್ಲಿ ನನ್ನ ಕೈ ಬೇಲಿಗೆ ತಾಗಿ ‘ಫಟ್’ ಅಂತ ಕರೆಂಟ ಹೊಡದೆ ಬಿಟ್ಟಿತ್ತು. ಯಪ್ಪೋ .. ದೇವಾ! ದೇವಾ!.. ಅಂತ ಇದರ ಸಹವಾಸವೇ ಬೇಡ ಅಂತ ಅಲ್ಲಿಂದ ಜಾಗ ಖಾಲಿ ಮಾಡಿ ಬೇರೆ ಕೆಡಯಿಂದ ದಾರಿ ಮಾಡಿಕೊಂಡು ಹೊರಟೇವು.
ಎಂತಹ ವಿಚಿತ್ರ ಅಂದ್ರೇ ಇನ್ನು ಲೈನ್ ವಾಕ್ ಶುರುಮಾಡಿಲ್ಲ ಅಂತಹದರಲ್ಲಿ ಈ ತರಹದ ಅನುಭವವನ್ನ ನನ್ನ ಜೀವಮಾನದಲ್ಲಿ ಎಂದಿಗು ಮರೆಯಲಾಗದ ಅನುಭವ ಅಂದು ಕೊಳ್ಳುತ್ತಾ, ರೀ.. ಗಣೇಶ ಲೈನ್ ವಾಕ್ ಶುರುಮಾಡೋಣ ಸಮಯ ಸರಿಯಾಗಿ ಬೆಳಿಗ್ಗೆ 06:30 ಗಂಟೆ ಆಗಿದೆ. ನೋಡರಿ ನಾನು ಮುಂದೆ ನಡಿತೀನಿ ನೀವು ನನ್ನ ಹಿಂದೆ ನಡಿರಿ. ಅದಕ್ಕೆ ಆ ವಯ್ಯಾ ಇವತ್ತು ಏನು ಕಾಣಲ್ಲ ಸರ್… ಬರೀ ದನ, ಮೇಕೆನೆ ಸೈಟಿಂಗ್ ಮಾಡೋದು ಅಂದ. ಆಯತಪ್ಪಾ ನಡಿ.. ನಡಿ.. ಎಂದೆ.
ನಿಧಾನವಾಗಿ ನಡಿತಾ ನಡಿತಾ ಮುಂದೆ ಹೋಗಬೇಕಾದರೆ ಸ್ವಲ್ಪ ಎತ್ತರ ಜಾಗ ಇನ್ನೇನು 200 ಮೀಟರ ದಾಟಿದ್ದಿವಿ. ಸಾರ್.. ಸಾರ್.. ಅಂತ ಕರೆದ, ಏನರೀ ಗಣೇಶ (ಪಿಸುಮಾತಿನಲ್ಲಿ) ಏನಾದರೂ ನೋಡಿದರಾ? ಅದಕ್ಕೆ ಆ ವಯ್ಯಾ ಮುಂದೆ ನೋಡಿ ಆನೆ ಇದೆ ಅಂದ. ಹೌದಾ! ಇನ್ನೇನು ಅಲ್ಲಿಂದ ಕಾಲ್ಕಿತ್ತು ಓಡಬೇಕು ಅನ್ನೋಷ್ಟರಲ್ಲಿ ಸ್ವಲ್ಪ ತಾಳ್ಮೆಯಿಂದ ಒಂದು ನಿಮಿಷ ಅಲ್ಲೇ ಧೈರ್ಯಮಾಡಿ ಆಗ್ಗಿದಾಗಲಿ ಅಂತ ನಿಧಾನವಾಗಿ ಕೆಳಗೆ ಕೂತು ನೋಡಿದರೆ ಆನೆ ಕಾಲುಗಳು ಕಾಣ್ತಾ ಇಲ್ಲ, ಅದರ ದೊಡ್ಡದಾದ ದೇಹ ಅಂತು ಕಾಣ್ತಾನೇ ಇಲ್ಲ.. ಕಪ್ಪು ಕಪ್ಪಾಗಿ ಏನೋ ಕಾಣ್ತಾ ಇದೆ ಅಂತ ಧೈರ್ಯ ಮಾಡಿ ಬಗ್ಗಿ ನೋಡಿದರೆ ಒಂದು ವೃತ್ತಾಕಾರದ ಕಲ್ಲು ಬಂಡೆ! ಅಯ್ಯಯ್ಯೋ.. ರೀ ಇದು ಆನೆ.. ಅಲ್ಲಾ ರೀ ದೊಡ್ಡದಾದ ಕಲ್ಲು ಬಂಡೆ ಅಂತ ನನಗೆ ಖಾತ್ರಿ ಆದಾಗ ನಿಧಾನವಾಗಿ ನಿಟ್ಟುಸಿರು ಬಿಟ್ಟೆ. ರೀ.. ಕಲ್ಲನ್ನ ಏನಾದರೂ ಆನೆ ಅಂತರಾ ಅಂತ ಸ್ವಲ್ಪ ಮೆಲು ಧ್ವನಿಯಲ್ಲಿ ಹೇಳಿದೆ ಸ್ವಾಮಿ… ನಾನು ನಿಂತ ಪಕ್ಕದಲ್ಲಿ ಒಂದು ಹಂದಿ ನಮ್ಮತ್ತ ಎಗರೆ ಬಿಟ್ಟಿತ್ತು.
ಯಪ್ಪೋ… ಹಂದಿ ನಮ್ಮತ್ತ ಓಡಿ ಬರತಾ ಇದೆ ಅದರ ಕೋರೆ ಹಲ್ಲುಗಳು ತಾಗಿದರೆ ಅಷ್ಟೇ ಅಂತ ಅಂದುಕೊಳ್ಳುವಷ್ಟರಲ್ಲಿ ನನ್ನ ಕಾಲುಗಳ ಮಧ್ಯದಿಂದ ರಭಸದಿಂದ ಕುಯಂ… ಕುಯಂ…. ಅಂತ ಜೋರಾಗಿ ಅರಚುತ್ತಾ ಬಂದ ಹಂದಿ ಸ್ವಲ್ಪವು ನಮ್ಮನ್ನ ನೋಡಿ ಹೆದರದೆ ಓಡಿ ಹೋಯಿತು. ಎಲ್ಲಿ ನಮಗೆ ಬಂದು ಗುದ್ದಿ ಬಿಡುತ್ತೆ ಅಂತ ಒಂದು ನೆಗೆತ ಹೊಡಿಯುವಷ್ಟರಲ್ಲಿ ಆಕಡೆ ಈಕಡೆ ಅಲುಗಾಡುವಷ್ಟರಲ್ಲಿ ಕ್ಷಣಾರ್ಧದಲ್ಲಿ ಹಂದಿ ‘ಎಸ್ಕೆಫ್’ ಆಗಿಬಿಟ್ಟಿತ್ತು. ಪಕ್ಕದಲ್ಲಿದ್ದರು ಅದರ ಇರುವಿಕೆ ನಮಗೆ ಗೊತ್ತಾಗಿಲ್ಲ ಎಂತಹ ಚಾಣಾಕ್ಷ ಹಂದಿ ಇರಬೇಕು ಅಂತ ಅಂದುಕೊಳ್ಳುತ್ತಾ ಇದ್ದವಿ.
ಅಂತು ಇಂತು ಮೊದಲನೇಯದಾಗಿ ಹಂದಿ ಸೈಟಿಂಗ್ ಮಾಡಿದ್ದಾಯಿತು ಅಂತ ಅಂದುಕೊಳ್ಳುವಷ್ಟರಲ್ಲಿ ಮುಂದೆ ಒಂದು ಹೆಜ್ಜೆ ಇಟ್ಟೆ ಅಷ್ಟೆ ಗುರ್.. ಗುರ್.. ಅಂತ ಜೋರಾಗಿ ಶಬ್ದ ಬರಲು ಶುರುವಾಯಿತು. ಗಿಡ-ಗಂಟಿಗಳ ಮಧ್ಯದಿಂದ ಶಬ್ದ ಇನ್ನು ಜೋರಾಗಿ ಬರಲು ಪ್ರಾರಂಭಿಸಿತು. ಎದೆ ಢವ! ಢವ! ಅಂತ ಜೋರಾಗಿ ಬಡಿದುಕೊಳ್ಳತಾ ಇತ್ತು. ನಿಂತ ಜಾಗದಿಂದ ಸ್ವಲ್ಪವು ಅಲುಗಾಡಲಿಲ್ಲ. ತಂಪಾದ ವಾತಾವರಣದಲ್ಲಿ ಆ ಶಬ್ದ ಕೇಳಿ ನಾನಂತು ತೀರಾ ಗಾಬರಿಗೊಂಡೆ. ಏನೋ ಇದೆ ಇಲ್ಲಿ ಪೊದೆಯಲ್ಲಿ ಅವಿತಿದ್ದರು ನಮಗೆ ಕಾಣ್ತಾ ಇಲ್ಲ. ಎಲ್ಲಿಂದ ಶಬ್ದ ಬರತಾ ಇದೆ ಅಂತ ಸ್ವಲ್ಪ ಎರಡು ಹೆಜ್ಜೆ ಹಿಂದೆ ಬಂದು ನೋಡಿದರೆ ಗಿಡ-ಗಂಟಿಗಳ ಮಧ್ಯೆ ಪೊದೆಯಲ್ಲಿ ‘ಹುಲಿರಾಯ’ ಅವಿತು ಕೂತು ಬಿಟ್ಟಿದ್ದೆ. ಹುಲಿರಾಯನನ್ನು ನೋಡಿದ ತಕ್ಷಣ ನನ್ನ ಪ್ರಾಣಪಕ್ಷಿ ಹಾರಿ ಹೊದಂಗಾಯಿತು. ಹುಲಿರಾಯನಿಗೂ ನಮಗೂ ಇರುವ ಅಂತರ ಬರೋಬ್ಬರಿ ಮೂರು ಮೀಟರ ಅಷ್ಟೇ..
ಅದರ ಸುಂದರವಾದ ಸದೃಢವಾದ ಹೊಳೆಯುವ ಮೈ ಬಣ್ಣ, ಮಿಂಚಿನ ಹೊಳಪುಳ್ಳ ಕಣ್ಣುಗಳು, ಅದರ ಉದ್ದನೇಯ ಕೋರೆ ಹಲ್ಲುಗಳನ್ನ ನೋಡಿ ಕಾಲುಗಳೆಲ್ಲ ಒಂದೇ ಸಮನೆ ಗಡ ಗಡ ಅಂತ ಅಲುಗಾಡಲು ಶುರುಮಾಡಿದವು. ಹುಲಿರಾಯ ನಿಧಾನವಾಗಿ ಪೊದೆಯಿಂದ ಒಂದು ಹೆಜ್ಜೆ ಮುಂದೆ ಬಂದು ಜೋರಾಗಿ ಘರ್ಜಿಸೆ ಬಿಟ್ಟಿತ್ತು. ಆ ಘರ್ಜನೆ ಕೇಳಿ ನನ್ನ ಕಿವಿ ಮಂಕಾಗಿ ಹೋಯಿತಲ್ಲದೆ ಎದೆ ಕಿತ್ತುಕೊಂಡು ಬಂದಂತಾಯಿತು. ಯಪ್ಪೋ… ಅಂತ ಇಬ್ಬರು ಜೋರಾಗಿ ಆಕಾಶಕ್ಕೆ ಕೈ ಮಾಡಿ ನೆಗೆದೆ ಬಿಟ್ಟೆವು ನಮ್ಮ ನೆಗೆತದಿಂದ ಅದರ ಮನಸ್ಸಿನಲ್ಲಿ ಏನು ಮೂಡಿತೋ ಗೊತ್ತಿಲ್ಲ ನಮ್ಮನ್ನ ನೋಡಿ ವೃತ್ತಾಕಾರದ ಬಂಡೆಯ ಹಿಂದೆ ಇಳಿದು ಹೋಯಿತು.
ನಾನು ನಿಧಾನವಾಗಿ ಗಣೇಶನಿಗೆ ಹೇಳುವಷ್ಟರಲ್ಲಿ ಆ ವಯ್ಯಾ ಸರ್.. ನೀವು ಇಲ್ಲೇ ರೀ ನಾನು ಹೋಗಿ ನೋಡಿ ಬರುತ್ತೇನೆ ಅಂದ. ಅದಕ್ಕೆ ನಾನು ರೀ.. ಗಣೇಶ ಅದು ನಮ್ಮ ಊರಾಗಿನ ಎಮ್ಮೆ ಅಲ್ಲಪ್ಪಾ ಹೋಗಿ ನೋಡಿ ಬರಾಕ ಹುಲಿ.. ಅದ ಅದು ಹುಲಿ.. ಅಂದೆ. ಯಾಕಂದರೆ ಬೇರೆ ದಾರಿಯಿಲ್ಲ ಸ್ವಲ್ಪ ಪ್ರಮಾಣದ ಅಗಲವಾದ ಕಲ್ಲಿನ ಹಾಸಿಗೆ ಇರೋದರಿಂದ ಅಲ್ಲಿಂದಲೇ ನಡೆದು ಹೋಗಬೇಕು. ನಿಧಾನವಾಗಿ ಹೋಗಿ ಆತ ಕಲ್ಲು ಬಂಡೆ ಕೆಳಗೆ ಇಣುಕಿ ನೋಡ್ತಾನೆ ಹುಲಿರಾಯ ಅಲ್ಲೇ ಕೆಳಗೆ ಕೂತಿದೆ. ನಾನು ಕೂಡಾ ನಿಧಾನವಾಗಿ ಹೋಗಬೇಕು ಅಂದಕೊಳ್ಳತಾ ಇದ್ದೀನಿ ಆದರೆ, ಒಂದೇ ಒಂದು ಹೆಜ್ಜೆ ಮುಂದೆ ಇಡಬೇಕು ಅಂದರ ಕಾಲಾಗಿನ ಶಕ್ತಿ ಹೋಗೆ ಬಿಟ್ಟಿತ್ತು ಮತ್ತೆ ಹುಲಿರಾಯ ಘರ್ಜಿಸುತ್ತಾ ಒಂದೇ ಸಮನೆ ಓಡ್ತಾ ಇದೆ.
ನನಗೆ ಈಗಲೂ ಆ ಸನ್ನಿವೇಶ ಸರಿಯಾಗಿ ನೆನಪಿದೆ ಹುಲಿರಾಯನ ಒಂದು ನೆಗೆತ ೪-೫ ಅಡಿಗಳಷ್ಟು ಇತ್ತು. ನಾನು ನಿಂತಲ್ಲೇ ನಿಂತು ನೋಡ್ತಾ ಇದ್ದೇ ನಾವು ಹೋಗೋ ದಾರಿಯಲ್ಲೇ ಓಡ್ತಾ ಇದೆ. ಸರಿಸುಮಾರಾಗಿ ೩೦ ಮೀಟರಗಳಷ್ಟು ಓಡಿ ನಿಂತು ನಂತರ ನಮ್ಮನ್ನೇ ತಿರುಗಿ ನೋಡ್ತಾ ಇದೆ. ಹರ ಹರ ಮಹದೇವ! ಅಂತ ಅಂದುಕೊಳ್ಳತ್ತಾ ಹುಲಿರಾಯನ ಮುಂಜಾವಿನ ಭೋಜನಕ್ಕೆ ಅಡ್ಡಿ ನಮ್ಮಿಂದಲೇ ಆಗಿದ್ದು ಎಂದು ಒಳ ಒಳಗೆ ಶಪಿಸುತ್ತಾ ಇದ್ದೆ. ಅಂತು ನಮ್ಮ ಅದೃಷ್ಟದಲ್ಲಿ ಇವತ್ತು ಹುಲಿರಾಯನ ದರ್ಶನ ಆಯಿತು ಅಂತ ನಾನು ಮತ್ತು ಗಣೇಶ ಬೇರೆ ದಾರಿಯಲ್ಲಿ ಹೋಗಿ ಸ್ವಲ್ಪ ಎತ್ತರದ ಜಾಗದಲ್ಲಿ ಹೋಗಿ ನಿಂತು ನೋಡ್ತಾ ಇದ್ದೆವೆ. ಹುಲಿರಾಯ ಮತ್ತೆ ಅದೇ ದಾರಿಯಲ್ಲಿ ನಡೆದುಕೊಂಡು ಬಂದು ಅದೇ ಜಾಗದಲ್ಲಿ ಹೋಗಿ ಪೊದೆಯಲ್ಲಿ ಅವಿತು ಕುಳಿತು ಬಿಟ್ಟಿತ್ತು. ರೀ ಗಣೇಶ ಅದೇನೋ ಅಂತಿದ್ದಿರಲ್ಲ ದನ, ಮೇಕೆನೆ ನೋಡುಕೊಂಡು ಬರೋದು ಅಂತ ಇವತ್ತು ನಮ್ಮ ‘ನಸಿಬ’ನಲ್ಲಿ ಹುಲಿರಾಯನ ದರ್ಶನಮಾಡೋ ಭಾಗ್ಯ ಸಿಕ್ಕಿತು ಖುಷಿ ಪಡಿ. ನಡಿರಿ! ನಡಿರಿ! ಅಂತು ಇಂತು ಭರ್ಜರಿ ಸೈಟಿಂಗ್ ಆಯಿತು ಎಂದು ಸಂತೋಷದಿಂದ ಲೈನ್ ವಾಕ್ ಮುಗಿಸಿ ಬರೋಷ್ಟರಲ್ಲಿ ನಮ್ಮ ತಂಡದವರು ನಮಗಾಗಿ ಕಾಯ್ತಾ ಇದ್ದರು. ಅವರನ್ನ ನೋಡಿದಾಕ್ಷಣ ನಮಗೆ ಇವತ್ತು ಹುಲಿರಾಯನ ದರ್ಶನ ಆಯಿತು ಅಂತ ಕುಣಿದು ಕುಪ್ಪಳಿಸಿದೇವು.
ನುಗು ಅಭಯಾರಣ್ಯದಲ್ಲಿ ಲೈನ ವಾಕ್ ಮಾಡುವಾಗ ದರ್ಶನ ಕೊಟ್ಟ ಹುಲಿರಾಯನ ಚಿತ್ರ.. ಚಿತ್ರ ರಚಿಸಿದವರು- ಕೃಷ್ಣಾ ಸಾತಪೂರೆ, ವಿಜಯಪುರ.
ಪ್ರತಿ ಬಾರಿಯು ಈ ಘಟನೆಗಳನ್ನ ಮೆಲಕು ಹಾಕುತ್ತ ನಾನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಂಚರಿಸುತ್ತ ಪೂರ್ವಘಟ್ಟಗಳ ಬಂಡೆಗಾಡುಗಳತ್ತ ನಾನು ಪ್ರಯಾಣ ಬೆಳಸಿದೆ.
ನಮ್ಮ ತಂಡದವರಿಂದ ಆಗ ತಾನೇ ‘ಆಕ್ಯೂಪೆನ್ಸಿ’ ಸರ್ವೇ (Occupancy Survey) ಆಂಧ್ರ ಪ್ರದೇಶದ ಕೆಲ ಭಾಗಗಳಲ್ಲಿ ಶುರುವಾಗಿತ್ತು. ನನ್ನನ್ನು ಕೂಡಾ ಸರ್ವೇ ತಂಡದಲ್ಲಿ ಸೇರಿಸಿ ಕಳುಹಿಸಿಕೊಟ್ಟರು. ನಾನು ಮತ್ತು ಕೆಲ ಸಹೋದ್ಯೋಗಿಗಳ ಜೊತೆ ನೇರವಾಗಿ ಕರ್ನೂಲ ಜಿಲ್ಲೆಯ ಶ್ರೀಶೈಲ್ಂ ನ ‘ಸುಂದಿಪೆಂಟಾ' ಎಂಬ ಗ್ರಾಮದಲ್ಲಿ ಬಂದು ತಲುಪಿದೇವು. ಆಗ ಅಕ್ಟೋಬರ್ ತಿಂಗಳಾದ್ದರಿಂದ ಆ ಪ್ರದೇಶ ಹಚ್ಚ ಹಸುರಾಗಿ ಕಾಣುತ್ತಿತ್ತು. ಇಲ್ಲಿರುವ ವಾತಾವರಣ ಮತ್ತು ಬಯಲು ಸೀಮೆಯ ವಾತಾವರಣ ಒಂದೇ ತರಹ ಆಗಿತ್ತು. ಎಲ್ಲಿ ನೋಡಿದರಲ್ಲಿ ದೊಡ್ಡದಾದ ಬೆಟ್ಟ ಗುಡ್ಡಗಳು, ಭಯಂಕರವಾದ ಕಣಿವೆಗಳು, ಕೃಷ್ಣಾ ನದಿಯ ವಿಹಂಗಮ ನೋಟ, ವಿರಳವಾದ ಮರಗಿಡಗಳು, ಕಾಡಿನ ತುಂಬೆಲ್ಲ ಹೂವಿನ ಹಾಸಿಗೆ ತರಹ ತುಂಬಿ ಕೊಂಡಿರುವ ಚಿಕ್ಕ ಗಾತ್ರದ ವೃತ್ತಾಕಾರದ ಕಲ್ಲುಗಳು ಒಂಥರಹ ಅಪರೂಪದ ಕಾಡು ಅಂತ ಮನಸ್ಸಿನಲ್ಲಿ ಅನ್ನಿಸದೇ ಇರಲಾರದು.
ಒಂದಿನ ನಾನು ಸರ್ವೇ ಮುಗಿಸಿ ಕ್ಯಾಂಪಿಗೆ ಬೇಗ ಬಂದೆ ಆದರೆ ಆವತ್ತು ಒಂದು ತಂಡ ಸರ್ವೇಗಂತ ಹೋದವರು ಮರಳಿ ಬರಲೇ ಇಲ್ಲ ಎಲ್ಲರಿಗೂ ದೊಡ್ಡ ಚಿಂತೆಯಾಯಿತು. ರಾತ್ರಿ 8 ಗಂಟೆಯಾದರು ನಮ್ಮವರ ಸುಳಿವೇ ಇಲ್ಲ. ಫೋನ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಮ್ಮವರೆಲ್ಲರಿಗೂ ಭಯದ ಛಾಯೆ ಆವರಿಸಿತ್ತು ದಟ್ಟ ದುರ್ಗಮ ಕುರುಚಲು ಕಾಡು ಆಗಿದ್ದರಿಂದ ಏನಾದರೂ ಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂಬ ಅನುಮಾನಗಳು, ಊಹಾ-ಪೋಹಗಳು ಎಲ್ಲರ ಮನದಲ್ಲಿ ಹರಿದಾಡಲು ಶುರುವಾಯಿತು.
ಎನ್.ಎಸ್.ಟಿ.ಆರ್ (ನಾಗಾರ್ಜುನ ಸಾಗರ ಶ್ರೀಶೈಲಂ ಟೈಗರ್ ರಿಸರ್ವ) ಅತ್ಯಂತ ವಿಸ್ತಾರವಾದ ಮತ್ತು ಬೆಟ್ಟ ಗುಡ್ಡಗಳಿಂದ ಆವೃತವಾಗಿರುವ ಅರಣ್ಯ ಪ್ರದೇಶವಾದ್ದರಿಂದ ನಮಗೆ ಚಿಂತೆ ಶುರುವಾಯಿತು. ಸಮಯ 9 ಗಂಟೆಯಾದರೂ ಇನ್ನು ಅವರ ಸುಳಿವು ಸಿಗಲಿಲ್ಲ. ಇನ್ನು ತಡಮಾಡದೇ ಕಾಡಲ್ಲಿ ಕಳೆದು ಹೋದವರನ್ನ ಹುಡುಕಲು ಒಂದು ತಂಡ ರಚಿಸಿದೇವು ಮತ್ತು ಆ ವಲಯದ ಸಂಭಂದಪಟ್ಟ ಅರಣ್ಯ ಇಲಾಖೆಯವರಿಗೆ ಮಾಹಿತಿಕೊಟ್ಟು ನಿಮ್ಮಲ್ಲಿರುವ ಕೆಲ ಸಿಬ್ಬಂದಿಗಳನ್ನು ಕಳುಹಿಸಿ ಕೊಡಿ ಎಂದು ಮನವಿ ಮಾಡಿದೇವು. ಅದರಂತೆ ಅವರದೇ ಆದ ವಿಶೇಷ ೧೨ ಜನರ ತಂಡ, ಅರಣ್ಯದಲ್ಲಿ ಸಿಲುಕಿಕೊಂಡಿರುವರನ್ನು ಪತ್ತೆ ಹಚ್ಚಲು ವಿಶೇಷವಾದ ಸಮವಸ್ತ್ರದಲ್ಲಿ ಕಾರ್ಯಾಚರಣೆಗೆ ಇಳಿಯಿತು.
ಸಮಯ ರಾತ್ರಿ 11:30 ಗಂಟೆ ದಟ್ಟವಾದ ಅರಣ್ಯದಲ್ಲಿ ಹೋಗುವುದೆಂದರೇ ಸಾಮಾನ್ಯದ ಮಾತಾಗಿರಲಿಲ್ಲ ಹೀಗಿರುವಾಗ ನಮ್ಮ ಜೊತೆ ಬಂದಂತಹ ಸಿಬ್ಬಂದಿ ವರ್ಗದವರನ್ನು ರಾತ್ರಿ ಸಮಯ ಕರೆದುಕೊಂಡು ಹೋಗುವುದು ಬಹಳ ಕಷ್ಟದ ಕೆಲಸ. ಏನೇ ಆಗಲಿ, ಕಾಡಲ್ಲಿ ಸಿಲುಕಿ ಹಾಕಿಕೊಂಡವರನ್ನ ಹುಡುಕಿಯಾದರು ಕರೆದುಕೊಂಡು ಬರೋಣ ಅಂತ ಪಣತೊಟ್ಟೆವು. ಆ ಸಿಬ್ಬಂದಿಯವರೂ ರಾತ್ರಿ ಹೊತ್ತು ಎಲ್ಲಿ ಅಂತ ಅವರನ್ನು ಹುಡಕುವುದು? ಸರ್, ನಮ್ಮಲ್ಲಿ ಕೋಲು ಮತ್ತು ಟಾರ್ಚುಗಳ ವಿನಃ ಬೇರೆ ಯಾವ ಅಸ್ತ್ರಗಳು ನಮ್ಮಲ್ಲಿ ಇಲ್ಲ ಯಾವುದಾದರು ಪ್ರಾಣಿಗಳು ನಮ್ಮ ಮೇಲೆ ದಾಳಿ ಮಾಡಿದರೆ ಹೇಗೆ? ಎಂಬೆಲ್ಲಾ ಮಾತುಗಳು ಆ ನಿಶಬ್ಧವಾದ ವಾತಾವರಣದಲ್ಲಿ ಜೋರಾಗಿ “ಗುಸುಗುಸು”- “ಪಿಸುಪಿಸು” ಮಾತುಗಳು ಹರಿದಾಡಲು ಶುರುವಾದವು.
ಆ ದಿನ ಕಾಡೆಲ್ಲ ಬೆಳದಿಂಗಳಿನಿಂದ ಆವರಿಸಿತ್ತು. ಸ್ವಚ್ಛಂದವಾದ ಗಾಳಿಯನ್ನು ಅಹ್ಲಾದಿಸುತ್ತಾ ನನ್ನಲ್ಲಿ ನಾನು ಮರೆತು ಹೋದ ಅನುಭವವನ್ನು ಹೇಳುವುದಕ್ಕೆ ದಿನಗಳೆ ಸಾಕಾಗುವುದಿಲ್ಲ ಎಂದೆನಿಸುತ್ತದೆ. ಹೀಗಿರುವಾಗ ಅರಣ್ಯದಲ್ಲಿ ಸಿಲುಕಿಕೊಂಡವರನ್ನು ಹುಡುಕುವ ಕಾರ್ಯಾಚರಣೆ ಶುರುವಾಯಿತು ಎಲ್ಲರ ಕೈಯಲ್ಲಿ ಟಾರ್ಚು, ಟಾರ್ಚುಗಳಿಗೆ ಬೇಕಾದ ಶೆಲ್ ಗಳು, ಎರಡು ಲೀಟರಿನ ನೀರಿನ ಬಾಟಲಿಗಳು, ಪ್ರತಿಯೊಬ್ಬರ ಬ್ಯಾಗಿನಲ್ಲಿ ಎರಡೆರಡರಂತೆ ತಿಂಡಿ ತಿನುಸುಗಳನ್ನು ಹಾಕಿಕೊಂಡು ಹೊರಟೇವು.
ಮಧ್ಯ ಮಧ್ಯ ರಾತ್ರಿಯಲ್ಲಿ ಜೋರಾಗಿ ಒಬ್ಬರಾದ ಮೇಲೆ ಒಬ್ಬರಂತೆ ಕೂಗೂತ್ತಿದ್ದೇವು. ಕಿರಣ-ಪವನ (ಅರಣ್ಯದಲ್ಲಿ ಸಿಲುಕಿಕೊಂಡ ತಂಡದ ಸದಸ್ಯರು) ಎಲ್ಲಿದ್ದಿರಾ ಎಂಬ ಧ್ವನಿ ಕಾಡಿನ ಮಧ್ಯ ಇಂಪಾಗಿ ಕೇಳಿಸುತ್ತಿತ್ತು. ನಾನು ಸಹ ಕೂಗಿದೆ ಕೂಗಿ ಕೂಗಿ ನನ್ನ ಧ್ವನಿ ಪೆಟ್ಟಿಗೆಯ ಗಂಟೆ ಭಾರಿಸತೊಡಗಿತು. ನಿಧಾನವಾಗಿ ಕೂಗು….. ನಿಧಾನಗತಿಯಲ್ಲಿ ಕೂಗು ಎಂದು ಆದರೆ, ನನ್ನ ಜೊತೆ ಬಂದಂತಹ ನಮ್ಮ ತಂಡದ ಸಹದ್ಯೋಗಿಗಳಾದಂತಹ ಹರ್ಷಾ, ಶ್ರೀಧರ ದುಪಾಡು ದಣಿವಾದರೂ ಸಹ ಕೂಗೂವುದನ್ನ ನಿಲ್ಲಿಸಲಿಲ್ಲ. ಅತ್ಯಂತ ಕಠಿಣವಾದ ಕಲ್ಲಿನಿಂದ ಆವೃತವಾದ ಕಾಲುದಾರಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ನಮಗೆ ದೊರಕಿದ್ದು ಸರಿಸುಮಾರು 800 ಮೀಟರಗಳಷ್ಟು ಆಳವಾದ ಬೆಟ್ಟ. ರಾತ್ರಿ ಸಮಯದಲ್ಲಿ ಇಕ್ಕಟ್ಟಾದ ಬೆಟ್ಟದ ಪ್ರದೇಶದಲ್ಲಿ ಇಳಿಯುವಂತಹ ದಾರಿಯು ಸಹ ಅದಾಗಿರಲಿಲ್ಲ. ಇಳಿಜಾರಿನಿಂದ ಕೂಡಿದ ಬೆಟ್ಟದ ದಾರಿ ಮತ್ತು ಕುಸಿಯುತ್ತಿರುವ ಕಲ್ಲುಗಳ ಮಧ್ಯೆ ಎಲ್ಲಿ ಜಾರಿ ಬಿದ್ದು ಬಿಡುತ್ತೇವೆ ಎಂಬ ಭಯ ಎಲ್ಲರಲ್ಲಿ ಆವರಿಸಿತ್ತು. ಬಂಡೆಯಲ್ಲಿದ್ದ ಮಣ್ಣು ಸಹ ಅಷ್ಟೊಂದು ಗಟ್ಟಿಯಾಗಿರಲಿಲ್ಲ. ಅರಣ್ಯದಲ್ಲಿ ಸಿಲುಕಿಕೊಂಡಿರುವವರು ಇದೇ ದಾರಿ ಬಳಸಿಕೊಂಡು ಹೋಗಿರುವಂತಹ ದಾರಿಯಲ್ಲೇ ನಾವು ಸಹ ಹೋಗ ಬೇಕಾಗಿತ್ತು.
ನಮ್ಮಲ್ಲಿ ಸುಸಜ್ಜಿತವಾದ ಜಿ.ಪಿ.ಎಸ್ (ಗ್ಲೋಬಲ್ ಪೋಸಿಷನಿಂಗ್ ಸಿಸ್ಟ್ಂ) ಮತ್ತು ದಿಕ್ಸೂಚಿ (ಕಂಪಾಸ), ಆ ಪ್ರದೇಶದ ಕೆಲ ನಕ್ಷೆಗಳ (Topographic Map) ಮುಖಾಂತರವೇ ಅರಣ್ಯದಲ್ಲಿ ಸಿಲುಕಿಕೊಂಡವರನ್ನು ಪತ್ತೆ ಹಚ್ಚಲು ಬಹಳ ಉಪಯೋಗವಾಗುವಂತಹ ಸಾಧನಗಳು ಇದ್ದುದ್ದರಿಂದ ಅವರನ್ನು ಸುಲಭವಾಗಿ ಪತ್ತೆ ಹಚ್ಚಬಹುದಾಗಿತ್ತು. ಏತನ್ಮಧ್ಯೆ ನಮ್ಮ ತಂಡದವರು ಒಂದು ಪ್ರಾಯೋಗಿಕವಾಗಿ ಮತ್ತು ಸುಸಜ್ಜಿತವಾಗಿ ಕಾರ್ಯಸೂಚಿಯನ್ನು ಸೂಚಿಸುವುದರ ಮೂಲಕ ಯೋಜನೆಯನ್ನು ರೂಪಿಸಿದರು. ಈ ರಾತ್ರಿ ಇಲ್ಲೇ ಕಳೆದು ಬೆಳಗಿನ ಜಾವ ಸಮಯ 6 ಗಂಟೆಯ ಆಸುಪಾಸಿನಲ್ಲಿ ಕಾರ್ಯಾಚರಣೆ ಪ್ರಾರಂಭಿಸೋಣ ಎಂದು ನಮ್ಮ ಜೊತೆ ಬಂದಂತಹ ಅರಣ್ಯ ಸಿಬ್ಬಂದಿವರ್ಗದವರಿಗೆ ತಿಳಿಸಿದೇವು ಅದರಂತೆ ಅವರು ಸಹ ನಿಮ್ಮ ಮಾತಿನಂತೆ ನಡೆದು ಕೊಳ್ಳುತ್ತೇವೆ ಎಂದು ಸಹಮತಿ ಸೂಚಿಸಿದರು.
ಅಗಲವಾದ ಬಂಡೆಯ ಮೇಲೆ ರಾತ್ರಿ ಹೊತ್ತು ಕಾವಲು ಕಾಯುತ್ತ ಕುಳಿತಿರು ದೃಶ್ಯ. ಚಿತ್ರ ರಚಿಸಿದವರು- ಕೃಷ್ಣಾ ಸಾತಪೂರೆ, ವಿಜಯಪುರ.
ಅದೇನೆ ಇರಲಿ, ಆ ರಾತ್ರಿ ಹೊತ್ತು ಸ್ವಚ್ಛಂದವಾದ ನಿಸರ್ಗದ ಮಡಿಲಲ್ಲಿ ಆಕಾಶದಲ್ಲಿರುವ ನಕ್ಷತ್ರಗಳನ್ನು ನೋಡಿ ಆನಂದಿಸಿದ ಸಮಯ, ಕ್ಷಣ ಯಾವತ್ತು ಮತ್ತೆ ಸಿಗುವುದಿಲ್ಲ. ಇಂಪಾಗಿ ಕೇಳಿಸುತ್ತಿರುವ ನಿಶಾಚರ ಪ್ರಾಣಿಗಳ ಕೂಗು ಕಿವಿಗೆ ಹಿತವನ್ನು ಕೊಡುತ್ತಿತ್ತು. ಕರಡಿಗಳು ರಾತ್ರಿ ಹೊತ್ತು ಜೋರಾಗಿ ಕೂಗುವುದು ಸಹ ಕೇಳಿಸುತ್ತಿತ್ತು. ತಣ್ಣನೆಯ ಗಾಳಿ ನಮ್ಮವರಿಗೂ ತಾಗಿದರು ಸಹ ನಿದ್ದೆಯ ಕಂಬಳಿಯಲ್ಲಿ ಜಾರಿ ಹೋಗಿದ್ದರ ಅರಿವೂ ಕೂಡಾ ಅವರಿಗಿರಲಿಲ್ಲ. ನಾನು ಮಾತ್ರ ಆ ರಾತ್ರಿ ಹೊತ್ತು ಕಾವಲು ಕಾಯುವುದು ನನ್ನ ಕೆಲಸ. ಸತತವಾಗಿ ೩ ಗಂಟೆಯವರೆಗೆ ಕಾವಲು ಕಾಯಬೇಕು ತದನಂತರ ಮಲಗಿರುವ ಒಬ್ಬ ಸದಸ್ಯರನ್ನು ನಿದ್ರೆಯಿಂದ ಎಚ್ಚರಿಸಿ ಅವರಿಗೆ ಕಾವಲು ಕಾಯಲು ಹೇಳಿ ನಾನು ಮಲಗಬೇಕು ಎಂಬುದು ಕಾರ್ಯಸೂಚಿಯ ವೈಖರಿಯಾಗಿತ್ತು. ಹೀಗೆ ಪ್ರತಿಯೊಬ್ಬರು ಆ ರಾತ್ರಿ ಒಬ್ಬರಾದಂತೆ ಒಬ್ಬರು ಕಾವಲು ಕಾಯುತ್ತಿದ್ದರು.
ಬೆಳಗಿನ ಸಮಯ 5 ಗಂಟೆ 45 ನಿಮಿಷ ಆಗಿತ್ತು. ತಣ್ಣನೆಯ ಗಾಳಿ ಸೂಯಂ! ಸೂಯಂ! ಎಂದು ಶಬ್ದಮಾಡುತ್ತಿತ್ತು ಎಂಬುವುದನ್ನು ಆಲಿಸುತ್ತಿದ್ದೆ. ಹಕ್ಕಿಗಳ ಕಲರವ ಚುಯಂ! ಚುಯಂ! ಎನ್ನುವ ಧ್ವನಿ ಮತ್ತು ನವಿಲುಗಳು ಕ್ಯಾಯಂ… ಕ್ಯಾಯಂ.. ಎಂದು ಜೋರಾಗಿ ಕೂಗುವಿಕೆ, ಮಂಗ-ಮುಷ್ಯಾಗಳು ನಮ್ಮನೇ ನೋಡಿ “ಗಿಸ್-ಗಿಸ್” ಎಂದು ಕಿರಿಚಾಡುವ ಶಬ್ದ ಕಿವಿಗಳಿಗೆ ಇಂಪಾಗಿ ಸಂಗೀತ ಸುಧೆಯಾಗಿ ಕೇಳಿಸುತ್ತಿತ್ತು. ಸ್ವಲ್ಪ ಸಮಯದ ನಂತರ ನಾನು ಬೇರೆ ಸ್ಥಳದಲ್ಲಿ ಮಲಗಿದ್ದ ಅರಣ್ಯ ಇಲಾಖೆಯ ಸಿಬ್ಬಂದಿಯವರನ್ನು ನಿದ್ರೆಯಿಂದ ಎಚ್ಚರಿಸಿ ಬೇಗ ತಯ್ಯಾರಾಗಿ ಹೊರಡಬೇಕು ಇದೇ ಸರಿಯಾದ ಸಮಯ ಬೇಗೆ ಬೇಗ ಬನ್ನಿ ಎಂದು ಹೇಳಿದೆ.
ಆದರೆ, ಆ ಸಿಬ್ಬಂದಿಗಳ ಒಂದೇ ಹಠ ಶುರುವಾಯಿತು. ಸರ್, ನಮ್ಮನ್ನು ದಯವಿಟ್ಟು ಕ್ಷಮಿಸಿ ಈ ದಟ್ಟವಾದ ಕಾಡಿನಲ್ಲಿ ಬರಲು ನಮಗೆ ಭಯ ಹೀಗಾಗಿ ನಾವು ಕಾಡಿನಲ್ಲಿ ನಿಮ್ಮ ಜೊತೆ ಬರಲು ಸಾಧ್ಯವಿಲ್ಲ ಬೇಕಾದರೆ ನೀವು ಹೋಗಿ ಎಂದು ಒಂದೇ ಸಮನೆ ನಮ್ಮಲ್ಲಿ ವಿನಂತಿಸಿಕೊಂಡರು. ಛೇ! ಇವರಂತು ಕೈ ಕೊಟ್ಟರು ಏನು ಮಾಡೋದು ಎಂದು ನಮ್ಮಲ್ಲಿ ಯೋಚನೆ ಶುರುವಾಯಿತು. ಯೋಚನೆಮಾಡುವಂತಹ ಸಮಯ ನಮ್ಮಲ್ಲಿ ಇಲ್ಲವಾದುದರಿಂದ ನಾನು ಮತ್ತು ನಮ್ಮ ತಂಡದ ಸದಸ್ಯರುಗಳು ಏನೇ ಅಗಲಿ ಯಾವ ಪರಿಸ್ಥಿತಿ ಎದುರಾದರೂ ಸಹ ನಮ್ಮವರನ್ನ ಹುಡಕಿಕೊಂಡು ಬರಬೇಕೆಂದು ಪಣತೊಟ್ಟೆವು. ನಮ್ಮ ಜೊತೆ ಬಂದಂತಹ ಸಿಬ್ಬಂದಿವರ್ಗದವರನ್ನು ನೀವು ಹೋಗಿ ನಮ್ಮ ಬಗ್ಗೆ ಚಿಂತೆ ಮಾಡಬೇಡಿ ನಮ್ಮ ತಂಡದವರನ್ನು ಹೇಗಾದರೂ ಮಾಡಿ ಪತ್ತೆ ಹಚ್ಚುತ್ತೇವೆ ಎಂದು ಅವರಿಗೆ ಹೇಳಿ ನಾವು ಮೂವರೇ ಅರ್ಧಕ್ಕೆ ನಿಂತ ಕಾರ್ಯಾಚರಣೆಯನ್ನು ಮತ್ತೆ ಶುರು ಮಾಡಿದೇವು.
12 ರಿಂದ 13 ಕಿ.ಮೀ ಗಳಷ್ಟು ಕಾಲ್ನಡಿಗೆಯಲ್ಲಿಯೇ ನಡೆದುಕೊಂಡು ಹೋಗುವ ಅತ್ಯಂತ ಕಠಿಣವಾದ ಸ್ಥಳವಾಗಿತ್ತು. ಸರಿಸುಮಾರಾಗಿ 8 ಬೆಟ್ಟಗಳ ಸಾಲುಗಳುಳ್ಳ ಕಿರಿದಾದ ಜಾಗದಲ್ಲಿ ದಾರಿ ಮಾಡಿಕೊಂಡು ನಡೆದು ಹೋಗುವದು ಅಂತಹ ಸುಲಭದ ಮಾತಾಗಿರಲಿಲ್ಲ. ಆ ಪ್ರದೇಶದ ಕಲ್ಲು ಬಂಡೆಗಳ ಮೇಲೆ ಸಂಗ್ರಹವಾದ ಮಳೆ ನೀರು ಕುಡಿಯಲು ಯೋಗ್ಯವಿಲ್ಲ ಒಂದು ವೇಳೆ ಅಕಸ್ಮಾತಾಗಿ ನೀರು ಕುಡಿದರೆ ‘ಕಾಮಾಲೆ’ ಎಂತಹ ರೋಗಗಳು ಕಾಣಿಸಿಕೊಳ್ಳುತ್ತವೆ ಎಂಬ ಭಯದಿಂದ ಯಾರು ಸಹ ನೀರನ್ನು ಕುಡಿಯುತ್ತಿರಲಿಲ್ಲ. ಶುಷ್ಕವಾದ ವಾತಾವರಣ ಎಲ್ಲಿ ನೋಡಿದರಲ್ಲಿ ಕುರುಚಲುಗಳಿಂದ ಕೂಡಿದ ಕಲ್ಲು-ಮುಳ್ಳುಗಳುಳ್ಳ ಪ್ರದೇಶ, ಚಿಕ್ಕದಾದ- ದೊಡ್ಡದಾದ ಕಲ್ಲು ಬಂಡೆಗಳು, ದೊಡ್ಡದಾದ ಮರಗಳು ಇದ್ದರು ಸಹ ಅದರಲ್ಲಿ ಒಂದು ಎಲೆಗಳಿಲ್ಲ. ಸೂರ್ಯನ ಬಿಸಿಲು ಕನಿಷ್ಟ ಅಂದರು 45 ರಿಂದ 48 ಡಿಗ್ರಿ ಯಷ್ಟು ಇರುವಂತಹ ಜಾಗೆಯಲ್ಲಿ ಮರದ ಬುಡದಲ್ಲಿ ನೆರಳಿಗಾಗಿ ಹೋಗಿ ಕುಡೋಣವೆಂದರು ಮರಗಳಲ್ಲಿ ಒಂದು ಎಲೆಗಳಿಲ್ಲ. ಮೈ ಚೂರು ಚೂರು ಎನ್ನುವಂತಹ ಬಿಸಿಲು ಬೆಳಿಗ್ಗೆ ೭ ಗಂಟೆ ಆಯಿತೆಂದರೆ ಸಾಕು ಸೂರ್ಯನ ಕಿರಣಗಳು ಭೂಮಿಯನ್ನು ಆವರಿಸಿದ್ದೇ ತಡ ಬೆಂಕಿಯ ಉಂಡೆಗಳಾಗುತ್ತಿದ್ದವು. ಒಂದು ವೇಳೆ ನಿಯಮಿತವಾಗಿ ನೀರನ್ನ ಉಪಯೋಗಿಸದಿದ್ದರೇ ಈ ಪ್ರದೇಶದಲ್ಲಿ ಎಲ್ಲಿಯೂ ನೀರು ಸಿಗುವುದಿಲ್ಲ. ಇಂತಹ ಪರಿಸ್ಥಿತಿಗಳ ಮಧ್ಯೆಯು ಹುಡುಕುವ ಪ್ರಯತ್ನ ಮತ್ತು ಆತ್ಮವಿಶ್ವಾಸಕ್ಕೇನು ಕೊರತೆ ಕಂಡುಬರಲಿಲ್ಲ. ಹುಮ್ಮಸ್ಸಿನಿಂದ, ಹುರುಪಿನಿಂದ ಮುಂದೆ ಸಾಗಿದೇವು.
ಕಿರಿದಾದ ಬಂಡೆಗಳ ಕೆಳಗೆ ನಿಧಾನವಾಗಿ ಇಳಿಯುತ್ತಾ ಸಾಗಿದೇವು ಆಗ ಸಮಯ ನಸುಕಿನ ಜಾವ 6 ಗಂಟೆ 30 ನಿಮಿಷ ಅವಧಿಯಲ್ಲಿ ನಾವು ಬೆಟ್ಟದಿಂದ ಕೆಳಗೆ ನಿಧಾನವಾಗಿ ಇಳಿಯುತ್ತಾ ಹೋದೆವು. ಸತತವಾಗಿ 45 ನಿಮಿಷಗಳ ಕಾಲ ಬೆಟ್ಟದಿಂದ ಕೆಳಗೆ ಸಮತಟ್ಟಾದ ಪ್ರದೇಶಕ್ಕೆ ಬರಲು ತೆಗೆದುಕೊಂಡ ಸಮಯ ಅದಾಗಿತ್ತು. ಕಠಿಣವಾದ ಬೆಟ್ಟದ ಇಕ್ಕೆಲಗಳಲ್ಲಿ ಇಳಿಯುವುದು ಒಂದು ಸವಾಲಾಗಿತ್ತು. ಬೆಟ್ಟ ಇಳಿಯಬೇಕಾದರೆ ಕಾಲುಗಳು ಜಾರುತ್ತಿದ್ದವು ಒಂದು ವೇಳೆ ಆಯ ತಪ್ಪಿ ಕೆಳಗೆ ಬಿದ್ದರೆ ಕಥೆ ಅಲ್ಲೇ ‘ಫಿನಿಷ’ ಆಗಿಬಿಡುತ್ತಿತ್ತು. ಎಚ್ಚರಿಕೆಯಿಂದ ನಡೆಯುತ್ತಿರಬೇಕಾದರೆ ನಮಗೆ ಮುಂದೆ ಕಾಣಿಸಿಕೊಂಡಿದ್ದು ದೊಡ್ಡ ಪ್ರದೇಶದಲ್ಲಿ ಹರಡಿಕೊಂಡಿರುವ ಅತೀ ಎತ್ತರದ ಬಿದರುಗಳು ಸಾಲುಗಳನ್ನು ಕಂಡು ಆಶ್ಚರ್ಯ ಚಕಿತರಾದೇವು.
ನಿಸರ್ಗ ವನಸಿರಿಯು ಹಸಿರು ಸೀರೆಯನ್ನು ಹೊದ್ದಿಕೊಂಡು ನಿಂತಿದ್ದಾಳೆ ಎಂದು ಭಾಸವಾಗುತ್ತಿತ್ತು. ಈ ಜೀವನವೇ ನಶ್ವರ, ನಮ್ಮ ಪಾಲಿಗೆ ಈ ನಿಸರ್ಗವೇ ದೇವರು ಅಂತಾ ಮನಸ್ಸಿನಲ್ಲಿ ಹಲವಾರು ಯೋಚನೆಗಳು ಬರತೊಡಗಿದವು. ಪವನ-ಕಿರಣ ಎಂದು ಎಲ್ಲರೂ ಒಂದೇ ರಾಗದಲ್ಲಿ ಕೂಗಿದೇವು ನಮ್ಮೆಲ್ಲರ ಧ್ವನಿ ಬಂಡೆಗಳಿಗೆ ಬಡಿದು ಮರಳಿ ನಮಗೆ ಪ್ರತಿಧ್ವನಿಯಾಗಿ ಕೇಳಿಸುತ್ತಿತ್ತು. ಸರಿಸುಮಾರಾಗಿ 5 ಕಿ.ಮೀ ನಡೆದರು ನಮ್ಮವರು ಮಾತ್ರ ಸಿಗಲಿಲ್ಲ. ಸಿಕ್ಕಾಪಟ್ಟೆ ಆಯಾಸ, ನೀರಡಿಕೆ, ದಣಿವು, ಹಸಿವು ಒಮ್ಮೇಲೆ ಶುರುವಾದವು. ‘ಬಂದ ದಾರಿಗೆ ಸುಂಕವಿಲ್ಲ' ಎಂಬ ಯುಕ್ತಿಯಂತೆ ಮರಳಿ ಹೊಗೋಣ ಎಂಬ ಆಶಾಭಾವ ನಮ್ಮಲ್ಲಿ ಕ್ಷೀಣಿಸುತ್ತಿತ್ತು. ಸಾಕು ಇನ್ನು ಮುಂದೆ ಹೋಗುವುದು ಬೇಡ ಎಂಬ ಗೊಂದಲ ಉಂಟಾಯಿತು.
ನಾನು ಮಧ್ಯದಲ್ಲಿ ಸಮಜಾಯಿಸಿ ಹೇಳಿದೆ ನೋಡಿ ಮರಳಿ ಹೋದರೆ ಮತ್ತೆ ಇದೇ ದಾರಿಯಲ್ಲಿ ಸಾಗಿ ಹೋಗಬೇಕು ಬೇರೆ ದಾರಿಯಿಲ್ಲ ಅದರ ಬದಲು ಮರಳಿ ಹೋಗುವ ಯೋಚನೆಯನ್ನು ಬಿಟ್ಟು ಇನ್ನುಳಿದ 7 ರಿಂದ 8 ಕಿ.ಮೀ ಇರುವ ದಾರಿಯ ಬಗ್ಗೆ ಯೋಚಿಸೋಣ ಎಂದು ನಮ್ಮ ತಂಡದ ಪ್ರತಿನಿಧಿಗಳಿಗೆ ಪುಕ್ಕಟೆ ಸಲಹೆ ಕೊಟ್ಟೆ. ಅದರಂತೆ ಎಲ್ಲರೂ ‘ನಡೆ ಮುಂದೆ.. ನಡೆ ಮುಂದೆ.. ನುಗ್ಗಿ ನಡೆ ಮುಂದೆ' ಎಂದು ಪಿಸುಮಾತಿನಲ್ಲಿ ಜೈಕಾರ ಹಾಕುತ್ತ ಸಾಗಿದೇವು. ನಾವು ಪಯಣದ ಹಾದಿಯಲ್ಲಿ ಸಂಚರಿಸುವಾಗ ದೊಡ್ಡದಾದ ಬ್ಯಾಗನ್ನು ಹೊತ್ತಿಕೊಂಡವರೇ ಶ್ರೀಧರ ದುಪಾಡು ಪಾಪ! ಅಂತ ಅನ್ನಿಸುತ್ತಿತ್ತು ಅವರ ಬ್ಯಾಗಿನಲ್ಲಿ ೫ ಲೀಟರ ನೀರಿನ ಬಾಟಲಿಗಳು ಸರಿಯಾಗಿ ೩ ಪ್ರಮಾಣದಲ್ಲಿದ್ದವು ಜೊತೆಗೆ ಆಹಾರದ ಪೊಟ್ಟಣಗಳು, ಪಾರ್ಲೆ ಬಿಸ್ಕತ್ತು ಗಳು ಮತ್ತು ಕೆಲ ಸಾಮಗ್ರಿಗಳನ್ನು ಹೊತ್ತಿ ಕೊಂಡು ನಡೆಯುವುದಿದೆಯಲ್ಲಾ ಅತ್ಯಂತ ಕಷ್ಠಕರ ಹೀಗಿರುವಾಗ ಅವರ ಆತ್ಮ ವಿಶ್ವಾಸಕ್ಕೇನು ದಕ್ಕೆ ಬರಲಿಲ್ಲ. ಆದರೆ, ಅವರ ದೇಹದ ರಚನೆ ನೋಡಿದರೆ ದಪ್ಪವಾಗಿರುವ ಮನುಷ್ಯ ಅಂತ ಹೇಳಬಹುದು..
ಇನ್ನೇನು ಸ್ವಲ್ಪ ಸಮಯ ಆಗಿತ್ತು ನಡೆದುಕೊಂಡು ಹೋಗ್ತಾ ಇದ್ದೇವು ದಾರಿಯ ಮಧ್ಯದಲ್ಲಿ ನಮಗೆ ದೊಡ್ಡದಾದ ನೀರಿನ ಹೊಂಡ ಸಿಕ್ಕಿದ್ದನ್ನು ನೋಡಿ ಆಗ ನಮಗೆ ಆಗಿದಂತಹ ಹುಮ್ಮಸ್ಸು, ಖುಷಿ ಒಂದು ಕಡೆ ಆದರೆ, ಆ ನೀರನ್ನು ಕುಡಿಯಲು ಬಳಸುವಂತಿಲ್ಲ. ಆ ನೀರು ಹರಿಯುವಂತಹ ನೀರಾಗಿರಲಿಲ್ಲ ಹೊರತು ಒಂದೇ ಕಡೆ ನಿಂತ ನೀರಾಗಿತ್ತು. ಆ ನೀರನ್ನು ನಮ್ಮ ಖಾಲಿಯಾದ ಬಾಟಲಿಗಳಲ್ಲಿ ತುಂಬಿ ಕೊಳ್ಳುವಂತಿಲ್ಲ. ಛೇ! ಎಂತಹ ವಿಪರ್ಯಾಸ ಬಂದು ಒದಗಿತಲ್ಲ ಎಂದು ಅಂದುಕೊಳ್ಳುತ್ತ ಬ್ಯಾಗಿನಲ್ಲಿರುವ ಆಹಾರದ ಪೊಟ್ಟಣಗಳನ್ನು ನಾವು ತಿನ್ನುವಂತಿಲ್ಲ. ನಾವೇ ತಂದಂತಹ ಆಹಾರದ ಪೊಟ್ಟಣಗಳು ನಮಗಾಗಿರಲಿಲ್ಲ ಅವು ಅರಣ್ಯದಲ್ಲಿ ಸಿಲುಕಿಕೊಂಡಿರುವ ತಂಡಗಳಿಗೆ ಮೀಸಲಾಗಿದ್ದವು. ಅಯ್ಯೋ! ದೇವರೆ.. ಎನ್ನುತ್ತ ನಾನು ಬ್ಯಾಗಿನಲ್ಲಿ ಏನಾದರು ಬಿಸ್ಕತ್ತು ಪ್ಯಾಕೇಟಗಳು ಇರಬಹುದೆಂದು ಕೈ ಹಾಕಿದಾಗ ಬ್ಯಾಗಿನಲ್ಲಿ ಏನು ಇರಲಿಲ್ಲ ಎಲ್ಲವೂ ದಾರಿ ಮಧ್ಯದಲ್ಲಿಯೇ ಖಾಲಿಯಾಗಿತ್ತು.
ಆಗ ಸರಿಯಾಗಿ ಮಧ್ಯಾಹ್ನ 12 ಗಂಟೆ ಸೂರ್ಯನ ಕಿರಣಗಳು ನಮ್ಮನ್ನೇ ಗುರಿಯಾಗಿಟ್ಟುಕೊಂಡು ಬಾಣದಂತೆ ಬಂದು ಬಡೆಯುತ್ತಿದ್ದವು ಎಂಬಂತೆ ಅನ್ನಿಸುತ್ತಿತ್ತು. ಕಲ್ಲಿನ ಹಾದಿಯಲ್ಲಿ ನಡೆದುಕೊಂಡು ಹೋಗುವುದು ಬಹಳ ಕಷ್ಟವಾಗುವುದರ ಜೊತೆಗೆ ದಾರಿ ಇಲ್ಲದ ಜಾಗಗಳಲ್ಲಿ ಮುಳ್ಳುಗಳನ್ನು ಪರಚಿಕೊಂಡು ನುಸುಳಿಕೊಂಡು ಹೋಗುವುದು ಬಹಳ ಕಷ್ಟದ ಕೆಲಸವಾಗಿತ್ತು. ಆದರೂ, ದೃತಿ ಗೆಡದೆ ಮುಂದೆ ಸಾಗಿದೇವು. ನನ್ನ ಜೊತೆಯಲ್ಲಿ ಇದ್ದವರು ಸಿಕ್ಕಾಪಟ್ಟೆ ದಣಿವಿನಿಂದ ತತ್ತರಿಸಿದ್ದರು ಕೆಲ ಕಾಲ ಎಲ್ಲಿಯಾದರು ಗಿಡದ ನೆರಳು ಸಿಕ್ಕರೆ ವಿಶ್ರಾಂತಿ ಪಡೆದು ಮುಂದೆ ಸಾಗೋಣ ಅಂತ ಹೇಳಿದರು. ಆಗ ನಾನು ನೀವಿಬ್ಬರೂ ಈ ಛಾವಣಿಯಿಲ್ಲದ ಮರದ ಕೆಳಗೆ ಮಲಗಿ ನಾನು ಕಾವಲು ಕಾಯುತ್ತೇನೆ ಅಂತ ಹೇಳಿದಾಗ ಎಲ್ಲ ಚಿಂತೆಯನ್ನು ಬದಿಗೊತ್ತಿ ಮಲಗಿದರು. ಆ ಪ್ರದೇಶದ ಬಿಸಿಲಿನ ಬಗ್ಗೆ ನನಗೆ ಗೊತ್ತಾಗಿದ್ದೆ ಆ ಕ್ಷಣದಲ್ಲಿ. ಅಯ್ಯೋ! ದೇವರೇ ಎನ್ನುತ್ತ ಜೋರಾಗಿ ಉಸಿರು ಬಿಡುತ್ತ ಹಣೆಯ ಮೇಲಿರುವ ಬೆವರನ್ನು ಒರೆಸುತ್ತಾ ತೀರಾ ಸುಸ್ತಾಗಿದ್ದೆ. ಇನ್ನು ಎಷ್ಟು ದೂರ ನಡೆಯಬೇಕು ಎಂದು ನಿರಾಶೆಯಿಂದ ಕೈಯಲ್ಲಿದ್ದ ಜಿ.ಪಿ.ಎಸ್ ನೋಡಿದೆ ಕೇವಲ ಇನ್ನೇನು ಸ್ವಲ್ಪೆ ದೂರ ೪ ರಿಂದ ೫ ಕಿ.ಮೀಗಳಷ್ಟು ದಾರಿ ಇದೆ ಎಂದು ಸಂತಸದಿಂದ ಒಮ್ಮೇಲೆ ಮಲಗಿದ್ದವರನ್ನು ಎಚ್ಚರಮಾಡಿ ಹೊಗೋಣ ಬನ್ನಿ ಇನ್ನೇನು ನಾವು ಕೆಲವೇ ಸಮಯದಲ್ಲಿ ಹೋಗಿ ತಲುಪಬಹುದು ಎಂದೇ ನೋಡಿ ಸ್ವಾಮಿ!
ಅದೇ ನಾನು ಮಾಡಿದ ದೊಡ್ಡ ತಪ್ಪು.. ಪಾಪ! ಆಗತಾನೇ ಮಲಗಿದ್ದವರು ದಿಗಿಲು ಬಡಿದಂತೆ ಎದ್ದು ಕಣ್ಣುಗಳನ್ನು ಉಜ್ಜುತ್ತಾ ನನ್ನನ್ನೇ ‘ಪಿಕಪಿಕ’ ಅಂತ ಕೋಪದಿಂದ ನೋಡುತ್ತಿರುವಾಗ ದಯವಿಟ್ಟು ಕ್ಷಮಿಸಿ ಎಂದು ವಿನಯವಾಗಿ ಹೇಳಿದೆ. ಆ ಕೆಂಪೂ ಕಣ್ಣುಗಳು ನನ್ನನ್ನೇ ಗುರಿಯಾಗಿಟ್ಟುಕೊಂಡು ಅರ್ದಂಬರ್ದ ಇನ್ನು ಕಲಿಯದ ತೆಲಗು ಭಾಷೆಯಲ್ಲಿ ನಾನು ಮಾತಾಡಿದೆ. ಮಧ್ಯ ಮಧ್ಯ ಇಂಗ್ಲೀಷ ಪದಗಳ ಬಳಕೆ, ಕನ್ನಡ ಬಳಕೆ ಎಲ್ಲವೂ ಮಾತಾಡೋವಷ್ಟರಲ್ಲಿ ನನ್ನ ಸ್ಥಿತಿ ಹರೋಹರವಾಗಿತ್ತು. ನಡಿರಿ ನಡಿರಿ ಮಲಗಿದ್ದು ಸಾಕು ನಡಿರಿ ನಡಿರಿ ಹೊಗೋಣ ಅನ್ನುತ್ತಿದ್ದಾಗ ನನ್ನ ಕಾಲುಗಳು ಮಾತನಾಡಲು ಶುರುಮಾಡಿದ್ದವು. ಅಯ್ಯೋ! ದೇವರೇ ಮತ್ತೆ ನಡೆಯಬೇಕೆ ಎಂದು ಗೊಣಗುತ್ತ ಯಾರಿಗೆ ಹೇಳಲಿ ನನ್ನ ಕಷ್ಟವನ್ನು ಇವರಿಗೆ ಹೇಳಿದರೆ ಇವರು ಯಾರು ಕೇಳುವಂತಹ ಸ್ಥಿತಿಯಲ್ಲಿ ಇಲ್ಲ. ಛೇ! ಎಂತಹ ವಿಪರ್ಯಾಸ ಎಂದು ಮುಂದೆ ನಡೆಯಲು ಶುರುಮಾಡಿದೇವು. ಆಗ ಒಕ್ಕರಿಸಿಯೇ ಬಿಟ್ಟಿತ್ತು ಯಮಗಂಡಕಾಲ.
ಒಂದು ದೊಡ್ಡದಾದ ಬೆಟ್ಟ, ಹಣೆಯ ಮೇಲೆ ಕೈ ಇಟ್ಟು ನೋಡಿದೆ ನಮ್ಮಲ್ಲಿರುವ ನಕ್ಷೆಯ ಸಹಾಯದಿಂದ ನೋಡಿದರೆ ಆ ಬೆಟ್ಟ ಸರಿಸುಮಾರು ೧೦೦೦ ಮೀಟರಗಳಷ್ಟು ಎತ್ತರವಾಗಿತ್ತು. ಅಯ್ಯೋ ಶಿವನೇ ಮತ್ತೆ ಅದೆ ಗೋಳು ಛೇ! ಓ… ದೇವರೆ ಇಲ್ಲಿ ಮೊದಲೇ ಕುಡಿಯಲು ನೀರಿಲ್ಲ. ಆಹಾರದ ಪೊಟ್ಟಣಗಳು ಇದ್ದರು ತಿನ್ನುವಂತಿಲ್ಲ. ಎಂತಹ ಕಷ್ಟ ಅನ್ನುವಷ್ಟರಲ್ಲೇ ಬೆಟ್ಟವನ್ನು ಹತ್ತಿ ಇಳಿದು ಬಿಟ್ಟೆವು. ಮೂವರಿಗೂ ಆಶ್ಚರ್ಯ ಇನ್ನೇನು ನಮ್ಮ ಹಾದಿಯೂ ಸುಗಮವಾಯಿತು ಅಂದುಕೊಳ್ಳುವಷ್ಟರಲ್ಲಿ ಎಲ್ಲಿ ನೋಡಿದರು ಸಹ ಹಸಿರು ಇಲ್ಲದೆ ಕಂಗೋಳಿಸುತ್ತಿರುವ ದೊಡ್ಡ ಬೆಟ್ಟ, ಚಿಕ್ಕ ಬೆಟ್ಟ ಎಲ್ಲಿ ನೋಡಿದರು ಬೆಟ್ಟಗಳ ಸಾಲುಗಳೇ ಎಂದು ನೋಡುತ್ತ ಮತ್ತೆ ಹತ್ತಬೇಕೆ ಅನ್ನುತ್ತ ಅಂತಹದರಲ್ಲಿ ನನಗೆ ಬಾಯಾರಿಕೆ ಜೋರಾಗಿ ಆಗಿತ್ತು. ನಮ್ಮಮರಲ್ಲಿ ಸ್ವಲ್ಪ ಕುಡಿಯಲು ನೀರಾದರೂ ಸಿಗಬಹುದು ಎಂದು ಕೇಳಿದೆ. ಆದರೆ, ಅವರ ಉತ್ತರ ನೇರ ದಿಟ್ಟ ನಿರಂತರವಾಗಿತ್ತು . ‘sorry’ ‘sorry’ ನನ್ನ ಹತ್ತಿರ ನೀರಿಲ್ಲ ಅದು ಇಲ್ಲ ಇದು ಇಲ್ಲ ಎಂದು ಹೇಳುವುದನ್ನು ಬಿಟ್ಟರೆ ಬೇರೆ ಪದದ ಬಳಕೆ ನಮ್ಮವರಿಗೆ ಗೊತ್ತಿತ್ತೋ ಇಲ್ಲವೋ ಎಂದು ಅನ್ನಿಸತೊಡಗಿತ್ತು. ಕ್ಷಮಿಸಿ ಸತೀಶ ನನ್ನ ಹತ್ತಿರ ನೀರಿಲ್ಲ. ಎಲ್ಲಾ ನೀರಿನ ಬಾಟಲಿಗಳು ಖಾಲಿ ಬೇಕಾದರೆ ಪರೀಕ್ಷಿಸಿ ನೋಡಿ ಎಂದಾಗ ಆ ಖಾಲಿಯಾದ ಬಾಟಲಿಗಳನ್ನು ಕೈಯಲ್ಲಿ ಹಿಡಿದು ಓರೆಯಾಗಿ ಅರ್ಧ ಕಣ್ಣಿನಿಂದ ನೋಡಿದೆ ಒಂದು ಹನಿ ನೀರು ಇರಲಿಲ್ಲ.
ನೀರಿಗಾಗಿ ಪರಿದಾಡಿದ ಕ್ಷಣ ಒಂದು ಹನಿ ನೀರಿನ ಮಹತ್ವ ಗೊತ್ತಾಗಿದ್ದೆ ಆಂದ್ರ ಪ್ರದೇಶದ ಕುರುಚಲು ಬೆಟ್ಟದಲ್ಲಿ ನಿಜವಾಗಿಯೂ ಹೇಳಬೇಕಂದರೆ ‘ಹನಿ ಹನಿ ಗೂಡಿದರೆ ಹಳ್ಳ' ಎಂಬ ಯುಕ್ತಿಯೇ ನನಗೆ ನೆನಪಾಗಿದ್ದು ಸುಳ್ಳಲ್ಲ ಅಂತಹದರಲ್ಲಿ ನನ್ನ ಧ್ವನಿ ಪೆಟ್ಟಿಗೆಯಿಂದ ಮಾತುಗಳೇ ಹೊರಬರಲು ತಿಣುಕಾಡಲು ಶುರುಮಾಡಿದವು. ರೀ ಹರ್ಷಾರವರೇ, ಶ್ರೀಧರವರೇ ಒಂದೇ ಒಂದು ಹನಿ ನೀರಿದ್ದರೆ ಕೊಡಿ ದಯಮಾಡಿ ಕೊಡಿ. ನಮ್ಮವರ ಮಾತು ವಜ್ರದ ಸಲಾಕೆಯಂತೆ ಕಠಿಣವಾಗಿದ್ದವು ನೀರಿಲ್ಲ ಅಂದರೆ ನೀರಿಲ್ಲ ಬಾಟಲಿಯಲ್ಲಿ ನೀರಿದ್ದರೆ ಕುಡಿಯಿರಿ ಎಂದರು. ಪಾಪ! ಅವರು ತಾನೇ ಏನು ಮಾಡಿಯ್ಯಾರು ಅವರ ಹತ್ತಿರನು ಸ್ವಲ್ಪವು ನೀರಿರಲಿಲ್ಲ. ಖಾಲಿಯಾದ ನೀರಿನ ಬಾಟಲಿಗಳನ್ನೇ ನೋಡಿ ಎಲ್ಲಿಯಾದರೂ ಒಂದು ನೀರಿನ ಹನಿ ಸಿಗುತ್ತಾ ಎಂದು ಬಾಟಲಿಯನ್ನು ಮೇಲಿನಿಂದ ಕೆಳಕ್ಕೆ ಅಲುಗಾಡಿಸಿ ನೀರಿನ ಹನಿಯನ್ನು ಹುಡುಕಿ ಬಾಟಲಿಯ ಮುಚ್ಚಳಿಕೆಯನ್ನು ತೆಗೆದು ತುಟಿಗೆ ಅಂಟಿಸಿಕೊಂಡಾಗ ಸ್ವಲ್ಪ ನಿರಾಳ ಅಷ್ಟೇ, ಮನಸ್ಸಿನಲ್ಲಿ ಅನ್ನಸಿತು ಸಿಕ್ಕಾಪಟ್ಟೆ ನೀರು ಕುಡಿದಷ್ಟೇ ಸಂತಸ ವೆನ್ನಿಸಿತು ಒಂದು ಕಡೆ ಅಷ್ಟೇ. ಛೇ! ಏನು ಮಾಡಬೇಕು ಮತ್ತೆ ನಡೆಯಬೇಕೆ ಅಯ್ಯೋ ದೇವರೆ! ಎಂದು ನಟ್ಟ ನಡುವಿನ ಕಾಡಿನ ಮಧ್ಯೆ ಗೋಗರೆಯುವಂತಹ ಸಂಧರ್ಭದಲ್ಲಿ ಉಳಿದಂತಹ ಬೆಟ್ಟಗಳನ್ನು ಹತ್ತಿ ಇಳಿದು ಬಿದ್ದು ಹೋಗುತ್ತಿರುವಾಗ ಇನ್ನೇನು ಗುರಿ ತಲುಪಬೇಕು ಅನ್ನುವಷ್ಟರಲ್ಲಿ ಸಮಯ ಸಾಯಂಕಾಲ 5 ಗಂಟೆ 30 ನಿಮಿಷವಾಗಿತ್ತು.
ಇನ್ನೇನು ಕಾರ್ಯಾಚರಣೆ ಮುಗಿಯುವ ಹಂತದಲ್ಲಿದ್ದಾಗ ಒಂದು ದೊಡ್ಡದಾದ ಬೆಟ್ಟ ನಮ್ಮವರನ್ನೆಲ್ಲ ನೋಡುತ್ತ ಹೀಗಂದಂಗಾಯಿತು. ಹೇ ಮನುಷ್ಯರೇ ಬನ್ನಿ ಬನ್ನಿ ಇನ್ನು ನನ್ನನ್ನು ಹತ್ತಿ ದಾಟಿ ಹೋದ ಮೇಲೆ ನಿಮಗೆ ದಾರಿ ಎಂದು ಜೋರಾಗಿ ನಕ್ಕಂತಹ ಅನುಭವವಾಯಿತು. ಬಹಳ ದೂರದಲ್ಲಿ ನಮಗೆ ವಿದ್ಯುತ್ ಕಂಬಗಳು ಕಾಣ ಸಿಗಲು ಪ್ರಾರಂಭಿಸಿದವು ಎಂಬುವುದು ಒಂದು ಕಡೆ ಅಷ್ಟೇ ಖುಷಿ. ನನಗೆ ಬಾಯಾರಿಕೆ ಜೋರಾಗಿದ್ದರಿಂದ ಕಟ್ಟ ಕಡೆಯದಾಗಿ ನನ್ನ ತಂಡದವರಲ್ಲಿ ಒಂದು ಪ್ರಶ್ನೆ ಇಟ್ಟೆ. ನೋಡಿ, ನಾವು ಹತ್ತಿ ನಿಂತಿರುವಂತಹ ಬೆಟ್ಟದ ಕೆಳಗೆ ಒಂದು ಮೂಲೆಯಲ್ಲಿ ಹಚ್ಚ ಹಸುರಾಗಿ ಮರಗಳು ಕಾಣುತ್ತಿವೆ ಅಲ್ಲಿ ಏನಾದರೂ ನೀರು ಸಿಗಬಹುದು ನಾವು ಅಲ್ಲಿಗೆ ಹೋಗುವ ಒಂದು ಪ್ರಯತ್ನ ಮಾಡೋಣ ಎಂದು ಹೇಳಿದೆ. ನಾವು ಇನ್ನು ಊರಿನ ಸಮೀಪ ಬಂದಿದ್ದೇವೆ ಇನ್ನು ೧ ಕಿ.ಮೀ ಇರುವ ದಾರಿಯನ್ನು ಬಿಟ್ಟು, ಬೆಟ್ಟದ ಕೆಳಗೆ ಹೋಗಿ ನೀರಿಗಾಗಿ ಹುಡಕೋಣ ಎಂದು ನಮ್ಮವರಲ್ಲಿ ವಿನಂತಿ ಮಾಡಿದೆ. ನೋಡಿ ಸತೀಶ ರಾತ್ರಿ ಆಗುವ ಸಮಯ ನಿಮಗೆ ಒಂದೇ ಒಂದು ಚಾನ್ಸ್ ಕೊಡುತ್ತೇವೆ ಎಂದು ಹೇಳಿದರು. ಆಯಿತು, ಅಂತ ನಾನು ಅವಕಾಶ ಸಿಕ್ಕ ತಕ್ಷಣವೇ ಒಮ್ಮೇಲೆ ಸೂಯಂ! ಸೂಯಂ! ಅಂತ ರಾಕೇಟ ತರಹ ಇಳಿದು ಬಿಟ್ಟೆ. ಸ್ವಲ್ಪ ಅಲ್ಲೇ ದಣಿವು ನಿವಾರಿಸಿಕೊಂಡು ನೋಡಿದರೆ ಅಯ್ಯೋ! ಇಲ್ಲಿ ನೀರು ಇಲ್ಲ ಏನು ಇಲ್ಲ ಎಂಬುದು ಖಾತ್ರಿ ಆಯಿತು. ತಪ್ಪು ಮಾಡಿ ಬಿಟ್ಟೆಯಲ್ಲ ಎಂದು ನನ್ನ ತಪ್ಪಿನ ಅರಿವಾಯಿತು. ಕೊಟ್ಟಂತಹ ಅವಕಾಶ ಕಳೆದುಕೊಂಡು ಬಿಟ್ಟೆ ಅಲ್ಲ ಎಂದು ಮನಸ್ಸಿನಲ್ಲಿ ಕೊರಗುತ್ತ ಒಂದು ಬಂಡೆಗಲ್ಲಿನ ಅಡಿಯಲ್ಲಿ ಹೋಗಿ ಮಲಗಿಬಿಟ್ಟೆ.
ನನ್ನ ಸ್ಥಿತಿ ತೀರಾ ಚಿಂತಾಜನಕವಾಯಿತು. ನನ್ನ ತಂಡದವರು ನಿವೇನು ಚಿಂತೆ ಮಾಡಬೇಡಿ ನಾವು ಹೋಗಿ ನೀರನ್ನು ತರುತ್ತೇವೆ. ಧೈರ್ಯವಾಗಿರಿ ಏನು ಆಗಲ್ಲ ಎಂಬ ಆಶಾಕಿರಣ ನನ್ನಲ್ಲಿ ಬಿತ್ತಿದ್ದರು ನೋಡಿ ಸ್ವಲ್ಪ ಮುಂದೆ ಹೋಗಿ ನೋಡೋಣ ಏನಾದರೂ ಸಿಗಬಹುದು ಎಂದಾಗ, ಹೊಗೋಣ ಬನ್ನಿ ಎನ್ನುತ್ತ , ಅಲ್ಲಿ ಇಲ್ಲಿ ದಣಿವಾರಿಸಿಕೊಂಡು ಕುರುತ್ತ 500 ಮೀಟರಗಳಷ್ಟು ದಾರಿ ನಡೆದಿದ್ದೇವು. ಯಾವುದೋ ಒಂದು ಭಾಗದಲ್ಲಿ ಜುಳು ಜುಳು ಹರಿಯುವ ನೀರಿನ ಶಬ್ದ ಕೇಳಿಸಿತು ತಕ್ಷಣವೇ ತಡಮಾಡದೇ ಅಲ್ಲಿಗೆ ಹೋದಾಗ ಒಂದು ದೊಡ್ಡದಾದ ನೀರಿನ ಹೊಂಡ ಬೆಟ್ಟದ ಇಳಿಜಾರಿನಿಂದ ಹರಿಯುತ್ತಿರುವದನ್ನು ಕಂಡು ನಿಧಾನವಾಗಿ ಹೋಗಿ ರಾತ್ರಿ ಸಮಯ ಯಾವ ಜೀವಿಗಳಿಗೂ ನಮ್ಮಿಂದ ಹಾನಿ ಆಗಬಾರದೆಂಬ ಪ್ರತಿಜ್ಞೆ ಗೊತ್ತಿದ್ದರೂ ಸಹ ಸೂಕ್ಷ್ಮವಾಗಿ ನಾವು ಮೂವರು ಸಂತೋಷ ಪಟ್ಟಿದ್ದೆ ದೊಡ್ಡದು. ಆ ನೀರಿನ ಹೊಂಡ ನಮ್ಮನ್ನು ಬದುಕಿಸಿದ ಜೀವ ರಕ್ಷಕ ವಿದ್ದಂತೆ. ಏನೇ ಆಗಲಿ ಆ ಸ್ಥಳವಂತು ಎಂದಿಗೂ ಮರೆಯೋದಿಲ್ಲ ಎಂದು ಅಂದುಕೊಳ್ಳುತ್ತ ನಮ್ಮ ಖಾಲಿಯಾದ ಬಾಟಲಿಗಳಲ್ಲಿ ನೀರನ್ನು ತುಂಬಿಕೊಂಡು ಹೊರಟು ಬಿಟ್ಟೆವು. ತದನಂತರದಲ್ಲಿ ಮತ್ತೊಂದು ಬೆಟ್ಟ ಹತ್ತುತ್ತಾ ಇನ್ನೇನು ಕೆಲವೇ ಕ್ಷಣಗಳಲ್ಲಿ ತಲುಪ ಬಹುದು. ಆದರೆ ಬೇಸರದ ಸಂಗತಿ ಎಂದರೇ ಅರಣ್ಯದಲ್ಲಿ ಸಿಲುಕಿಕೊಂಡವರು ಎಷ್ಟು ಕೂಗಿದರು, ಹುಡುಕಿದರು ಸಿಗಲೇ ಇಲ್ಲ ಎಂಬ ಒಂದು ಚಿಂತೆ ಮನದಲ್ಲಿ ಕಾಡುತ್ತಿರುವಾಗ ಬೆಟ್ಟ ಹತ್ತಿ ಮೇಲೆ ಬಂದಾಗ ಸಮತಟ್ಟಾದ ದಾರಿ ಸಿಕ್ಕಿತ್ತು. ಒಂದು ವಾಹನ ಕೆಲವೇ ಅಂತರದಲ್ಲಿ ಶಬ್ದ ಮಾಡುತ್ತ ಹೋಗುತ್ತಿರುವುದನ್ನು ನೋಡಿದ ಕೂಡಲೆ ಒಂದು ಅಗಲವಾದ ಡಾಂಬರ ರಸ್ತೆ ಸಿಕ್ಕಿತ್ತು ಎಂಬ ಖುಷಿಯಲ್ಲಿ ತೇಲಾಡಿದವು. ಸತತವಾಗಿ 15 ಗಂಟೆಗಳ ಕಾಲ ನಡೆದಾದ ಮೇಲೆ ಅಲ್ಲೇ ಹತ್ತಿರದಲ್ಲಿ ಅರಣ್ಯ ಸಿಬ್ಬಂದಿ ಕೊಠಡಿ ಸಿಕ್ಕಿತು. ಅಲ್ಲಿ ಕೆಲ ಕ್ಷಣ ಕೂತು ದಣಿವಾರಿಸಿಕೊಳ್ಳುತ್ತಿರುವಾಗ ನಮ್ಮ ಪೋನಗಳಿಗೆ ಕರೆಗಳು ಬರಲು ಶುರು ಮಾಡಿದವು. ಆ ಕಳೆದು ಹೋದ ತಂಡದ ಸದಸ್ಯರು ಪೋನ ಮಾಡಿ ನಾವು ಕ್ಯಾಂಪಿಗೆ ಬಂದು ತಲುಪಿದ್ದೇವೆ ಎಂದಾಗ ನಿಟ್ಟುಸಿರು ಬಿಟ್ಟು ಪ್ರಕೃತಿಯ ಸೊಬಗಿನ ದೇವತೆಯನ್ನು ಕೈ ಮುಗಿದು ನಮ್ಮ ಪ್ರಯಾಣ ಅಂತ್ಯಗೊಳಿಸಿದೇವು.
ಇನ್ನಷ್ಟು ರೋಚಕ ಕಥೆಗಳೊಂದಿಗೆ ಮತ್ತೆ ಬರುತ್ತೇನೆ ಅಲ್ಲಿಯವರೆಗೆ ಕಾಯಿರಿ…