ಪಶ್ಚಿಮ ಘಟ್ಟಗಳ ಮಾಯಾಲೋಕದಿಂದ ಪೂರ್ವ ಘಟ್ಟಗಳ ಬಂಡೆಗಾಡುಗಳವರೆಗೆ ನನ್ನ ಪಯಣ..
ಗತಿಸಿಹೋದ ಘಟನೆಗಳನ್ನು ಮೆಲಕು ಹಾಕುತ್ತ..
ಸತೀಶ ಗಣೇಶ ನಾಗಠಾಣ
ಪ್ರಕೃತಿಯು ಸುಂದರವಾದ ವಿಸ್ಮಯಗಳನ್ನು ತನ್ನ ಒಡಲೊಳಗೆ ತುಂಬಿಕೊಂಡಿರುವ ಅದೇಷ್ಟೋ ಘಟನೆಗಳು ನನ್ನ ಪಯಣದ ಕಥಾಹಂದರ ಸುತ್ತಲೂ ಆವರಿಸಿದೆ ಎಂದರೇ ಅದು ಒಂದು ಕೂತುಹಲ ಭರಿತವಾದ ಮತ್ತು ರೋಮಾಂಚನಗೊಳಿಸುವಂತಹ ಸಹ್ಯಾದ್ರಿ ಪರ್ವತ ಶ್ರೇಣಿಗಳ ಮಾಯಾಲೋಕವೆಂದು ಹೇಳಲು ನನಗೆ ಸೂಕ್ತವೆನಿಸುತ್ತದೆ.
ಗೋದಾವರಿ ನದಿ ತೀರದ ಹತ್ತಿರ ಕುಳಿತಿರುವ ದೃಶ್ಯ , ಪೋಲಾವರಂ, ಆಂಧ್ರಪ್ರದೇಶ.
ಪರಿಸರದ ಬಗ್ಗೆ ನನಗೆ ಅತ್ಯಂತ ಕಾಳಜಿ, ಕೈಯಲ್ಲಿ ಕ್ಯಾಮರಾ ಹಿಡಿದು ಸಿಕ್ಕ ಸಿಕ್ಕ ಮರ, ಪಕ್ಷಿ, ಚಿಟ್ಟೆ, ಜೇಡಗಳ ಚಿತ್ರ ತೆಗೆಯುವುದೇ ನನ್ನ ಹವ್ಯಾಸವಾಗಿತ್ತು. ನಿರಂತರವಾದ ಈ ಕಾರ್ಯ ನನಗೆ ತುಂಬಾ ಖುಷಿ ಕೊಡುತಿತ್ತು. ಚಿಕ್ಕಂದಿನಿಂದ ಮರಗಳೆಂದರೇ ನನಗೆ ಬಹಳ ಇಷ್ಟ. ಶಾಲಾ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುವ ಸಂಧರ್ಭದಲ್ಲಿ ವೃಕ್ಷಗಳ ಬಗ್ಗೆ ಅರಿವೂ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಕಾಲಕ್ರಮೇಣ ನನಗೆ ಪರಿಸರದ ಬಗ್ಗೆ ಒಲವೂ ಮೂಡಲು ಶುರುವಾಯಿತು. ಪರಿಸರಗೋಸ್ಕರ ದುಡಿಯಬೇಕೆಂಬ ಹಂಬಲ ಬಹಳ ದಿನಗಳಿಂದ ಮನದಲ್ಲಿ ಕಾಡುತ್ತಿತ್ತು.
ದಿನಗಳು ಜಾರಿದಂತೆ ಒಂದು ಸಲ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ 'ನಾರಾವಿ' ಎಂಬ ಪುಟ್ಟ ಹಳ್ಳಿಗೆ ರಜಾ ದಿನಗಳಲ್ಲಿ ಭೇಟಿ ಕೊಡುತ್ತಿದ್ದೆ. ಅಲ್ಲಿರುವ ಪ್ರಕೃತಿಯ ಒಡಲನ್ನು ಕಂಡು ಭಾವ ಪರವಶನಾದೆ. ದಿನಂಪ್ರತಿ ಊರೂರು ಅಲೆಯಲು ಶುರುಮಾಡಿದೆ. ಬೃಹದಾಕಾರವಾಗಿ ಬೆಳೆದು ಆಕಾಶಕ್ಕೆ ಏಣಿ ಹಾಕಿದಂತೆ ದೊಡ್ಡ ಗಾತ್ರದ ಮರಗಳನ್ನು ನೋಡಿ ಬೆರಗಾದೆ. ವನ್ಯಸಂಪತ್ತು, ವನ್ಯಜೀವಿಗಳ ಬಗ್ಗೆ ತಿಳಿದುಕೊಳ್ಳಲು ನನ್ನಲ್ಲಿ ಆಸಕ್ತಿ ಹೆಚ್ಚಾಗತೊಡಗಿತು. ನನ್ನ ಅಣ್ಣ ಪ್ರತಿದಿನ ಹಿಂಬಾಲಕರಾಗಿ ನಾನು ಮಾಡುವ ಪ್ರತಿ ಕಾರ್ಯಗಳನ್ನು ದಿನನಿತ್ಯ ಗಮನಿಸುತ್ತಿದ್ದರು. ನನ್ನ ಅಣ್ಣನ ಹಳೆಯ ಹಿರೋ ಹೊಂಡಾ ಬೈಕ್ ಹತ್ತಿ ಹೆಗಲಿಗೆ ಕ್ಯಾಮರಾ ಹಾಕಿಕೊಂಡು ಊರೂರು ಅಲೆಯುವುದು ತಪ್ಪಲಿಲ್ಲ. ಪ್ರತಿ ದಿನ ಇದನ್ನು ಕಂಡು ನನ್ನ ಅಣ್ಣನವರು ಮನೆಯ ಪಕ್ಕದಲ್ಲೇ ಇದ್ದ ಹಿರಿಯರಾದ ಮತ್ತು ಸಲಹೆಗಾರರಾದ ಶ್ರೀಯುತ ರಾಮಚಂದ್ರ ಭಟ್ರನ್ನು ಪರಿಚಯ ಮಾಡಿಸಿ ಅವರ ಸಲಹೆಯ ಮೇರೆಗೆ ಬೆಂಗಳೂರಿನಲ್ಲಿರುವ ಸೆಂಟರ್ ಫಾರ್ ವೈಲ್ಡಲೈಫ್ ಸ್ಟಡೀಸ್ (Centre for Wildlife Studies) ನಲ್ಲಿ ಕೆಲಸಕ್ಕೆ ಸೇರು ಅಂತ ಸೂಚಿಸಿದರು. ಅಲ್ಲಿಂದಲೇ ನನ್ನ ಪಯಣದ ದಾರಿ ಶುರುವಾಗಿದ್ದು.
ಕೆಲಸದ ನಿಮಿತ್ತ ನನ್ನನ್ನು ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೊಲ್ಲೂರಿನ ಸಮೀಪ ಶರಾವತಿ ವನ್ಯಜೀವಿಧಾಮಕ್ಕೆ ಹೊಂದಿಕೊಂಡಿರುವ ಮೂಕಾಂಬಿಕಾ ವನ್ಯಜೀವಿಧಾಮದ ವ್ಯಾಪ್ತಿಗೆ ಬರುವ 'ಆನೆಜರಿ' ಚಿಟ್ಟೆಗಳ ಕ್ಯಾಂಪ್ ನಲ್ಲಿ ನಮ್ಮ ತಂಡ ಕೆಲದಿನಗಳಿಂದ ಕೆಲಸದ ನಿಮಿತ್ತ ಅಲ್ಲಿಯೇ ಬಿಡುಬಿಟ್ಟಿತ್ತು. ಉತ್ತರ ಕರ್ನಾಟಕದ 'ವಿಜಯಪುರ' ಜಿಲ್ಲೆಯ 'ಬಯಲುಸೀಮೆ'ಯಿಂದ ಬಂದವನಾದ ನನಗೆ ಪರಿಸರ ಮತ್ತು ಪ್ರಕೃತಿಯ ವಿಸ್ಮಯಗಳನ್ನು ನೋಡಲು ಮನಸ್ಸು ಹಾತೊರೆಯುತ್ತಿತ್ತು. ಆಗ ತಾನೇ 'ಆಕ್ಯೂಪೆನ್ಸಿ ಸರ್ವೆ' (Ocupancy Survey) ಶುರುವಾಗಿತ್ತು. ಕೆಲಸಕ್ಕೆ ಸೇರಿಕೊಂಡ ಹೊಸದರಲ್ಲಿ ನನಗೆ ಯಾವುದೇ ರೀತಿಯಾದ ಉಪಕರಣಗಳ ಬಗ್ಗೆ ಅಷ್ಟೊಂದು ಮಾಹಿತಿ ಗೊತ್ತಿರಲಿಲ್ಲ. ಕಾಲಕ್ರಮೇಣ ಕಾಡನ್ನು ಸುತ್ತಾಡುತ್ತಾ ಕೆಲಸದಲ್ಲಿ ಆಸಕ್ತಿ ಹೆಚ್ಚುತ್ತ ಹೋದಂತೆ ಜಿ.ಪಿ.ಎಸ್ ಗಳ ಬಳಕೆ ಮಾಡುವುದು ಹೇಗೆ? ಎಂಬುದನ್ನು ಕಲಿತುಕೊಂಡೆ. ದಿನಂಪ್ರತಿ 10 ರಿಂದ 12ಕಿ.ಮೀಗಳಷ್ಟು ನಡೆಯಬೇಕು. ಕಾನನಗಳಲ್ಲಿ ಹರಿಯುವ ಬೆಟ್ಟದ ತುದಿಗಳಿಂದ ದುಮ್ಮುಕ್ಕುವ ಅದೆಷ್ಟೋ ಚಿಕ್ಕ ಚಿಕ್ಕ ಜಲಪಾತಗಳಿಂದ ಜುಳು ಜುಳು ಹರಿಯುವ ನೀರಿನ ನಾದ.. ಕೇಳುವ ಕಿವಿಗೆ ಸಂಗೀತದ ಆಹ್ವಾನ ಕೊಟ್ಟಂತೆ ಅನ್ನಿಸುತ್ತಿತ್ತು.
ನಿತ್ಯ ಹರಿದ್ವರ್ಣದ ಮತ್ತು ಎಲೆ ಉದುರುವ ಕಾಡುಗಳ ಬೃಹತ ಗ್ರಾತದ ಮರಗಳು, ಬಗಬಗೆಯ ಪಕ್ಷಿಗಳ ಕೂಗು, ತರತರವಾದ ಬಣ್ಣ ಬಣ್ಣದ ಹೂವುಗಳು ನೋಡುತ್ತಿದ್ದರೆ ಮನಸ್ಸಿಗೆ ಮುದ ನೀಡುತ್ತಿತ್ತು. ಇವುಗಳನ್ನೆಲ್ಲ ನೋಡುತ್ತಿದ್ದರೆ ನಾನೆಲ್ಲೋ ಮಾಯಾಲೋಕದಲ್ಲಿ ತೇಲಾಡುತ್ತಿದ್ದೇನೆ ಎಂದು ಭಾಸವಾಗುತ್ತಿತ್ತು. ಕಾಲ್ನಡಿಗೆಯಲ್ಲಿ ಚಲಿಸುತ್ತಿರುವಾಗ ಸೂರ್ಯನ ಬೆಳಕು ಕೊಂಚವು ನೆಲಕ್ಕೆತಾಗದೇ ಹಚ್ಚ ಹಸಿರಾಗಿ ಕಂಗೊಳಿಸುವ ದಟ್ಟ ಕಾಡುಗಳ ಅನುಭವ ಪಡೆಯಬೇಕಾದರೆ ಈ ತರಹದ ಕಾರ್ಯಗಳು ಸದಾ ನನಗೆ ಪ್ರೇರಣಾ ಸ್ವರೂಪವಾಗಿವೆ. ಆಯಾಸ, ದಣಿವು ಎಲ್ಲವನ್ನು ಮರೆತು ಪರಿಸರದ ಆಗುಹೋಗುಗಳನ್ನು ನೋಡುತ್ತ, ಸಂತೋಷಪಡುತ್ತ, ಎತ್ತರೆತ್ತರವಾದ 'ಕುದುರೆಮುಖ'ದಲ್ಲಿರುವ ಬೆಟ್ಟಗಳನ್ನು ಹತ್ತುವಂತ ಸಂಧರ್ಭದಲ್ಲಿ ದಟ್ಟವಾಗಿ ಹಬ್ಬಿಕೊಂಡಿರುವ ಹುಲ್ಲು ಹೆಚ್ಚಾಗಿ ಬೆಳೆದಿದ್ದರಿಂದ ನನಗೆ ಮತ್ತು ನನ್ನ ಜೊತೆಯಲ್ಲಿರುವ ಕ್ಷೇತ್ರ ಸಹಾಯಕರಿಗೆ ಮುಂದಿನ ದಾರಿ ಸ್ವಲ್ಪವೂ ಕಾಣಿಸುತ್ತಿರಲಿಲ್ಲ. ದಾರಿ ಮಾಡಿಕೊಂಡು ಮುಂದೆ ಚಲಿಸುತ್ತಿರುವಾಗ ಬಹಳ ಹತ್ತಿರದಿಂದ ಎದುರಾಗಿದ್ದೆ ಕಾಟಿ.. ಅದು ತನ್ನ ಪಾಡಿಗೆ ಹುಲ್ಲು ಮೇಯುತ್ತಾ ತನ್ನ ಕಾರ್ಯದಲ್ಲಿ ತಲ್ಲಿನವಾಗಿರುವ ಭಂಗಿಯನ್ನು ನೋಡಿ ಅಯ್ಯೋ.. ದೇವರೆ! ಕಾಟಿ.. ಮೈಯೆಲ್ಲಾ ಜುಮ್ಮೆಂದಿತು ನರನಾಡಿಗಳಲ್ಲಿ ರಕ್ತ ಜೋರಾಗಿ ಓಡಾಡಲು ಶುರುಮಾಡಿತು. ಅಂತಹದರಲ್ಲಿ ನಿಧಾನವಾಗಿ ನಿಟ್ಟುಸಿರು ಬಿಡುತ್ತಾ ನನ್ನ ಅದೃಷ್ಟ ಚೆನ್ನಾಗಿತ್ತು ಅಂತ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಾ ಅಲ್ಲೇ ಪಕ್ಕದಲ್ಲೇ ನಿಧಾನವಾಗಿ ಅದಕ್ಕೆ ಗೊತ್ತಾಗದ ಹಾಗೇ ತೊಂದರೆ ಕೊಡದೆ ಅಲ್ಲಿಂದ ಜಾಗ ಖಾಲಿಮಾಡಿ ಸ್ವಲ್ಪ ದೂರ ಹಿಂದೆ ಸಾಗಿ ಎತ್ತರವಾದ ಜಾಗಕ್ಕೆ ಬಂದು ಕಾಟಿಯನ್ನು ವೀಕ್ಷಿಸುತ್ತಾ ಅಲ್ಲೇ ನಿಂತು ನೋಡ ತೊಡಗಿದೆ ಅದರ ಅದ್ಭುತವಾದ ಸದೃಢವಾದ ಮೈಕಟ್ಟನ್ನು ನೋಡಿ ಆನಂದ ಪಟ್ಟೆ ಅದೇ ನನ್ನ ಮೊದಲ ಸೈಟಿಂಗ್ ಆಗಿತ್ತು.
ಕುದರೆಮುಖ ಅಭಯಾರಣ್ಯ - 'ಕಾಟಿ' ಹುಲ್ಲು ಮೇಯುತ್ತಿರುವ ದೃಶ್ಯ | ಚಿತ್ರ ರಚಿಸಿದವರು - ನಿಶಾಂತ್ ಎಸ್
ಸಹ್ಯಾದ್ರಿಯ ಪರ್ವತ ಶ್ರೇಣಿಗಳನ್ನ ಹತ್ತುವಂತಹ ಸಮಯದಲ್ಲಿ ನನ್ನ ಕಾಲುಗಳು ತಡವರಿಸುತ್ತಿದ್ದವು. ಪರ್ವತ ಶ್ರೇಣಿಗಳಲ್ಲಿ ಬೆಳೆದಿರುವ ಹುಲ್ಲುಗಾವಲು ಬಹಳ ದೂರದವರೆಗೆ ಕಾಣುತ್ತಿತ್ತು. ಹುಲ್ಲುಗಾವಲಿನಲ್ಲಿ ನಡೆಯುವುದು ಬಲು ಕಷ್ಟವಾಗುತ್ತಿತ್ತು. ದಿನ, ವಾರ, ತಿಂಗಳುಗಳು ಕಾಲಕ್ರಮೇಣ ಜಾರಿದಂತೆ ನಾನು ಸಹ ಪ್ರಕೃತಿಯ ಸೊಬಗಿನಲ್ಲಿ 'ಮಗು'ವಾಗಿ ಬಿಟ್ಟೆ ಎಂಬ ಕಲ್ಪನೆಯಲ್ಲಿ ತೇಲಾಡಲು ಶುರುಮಾಡಿದ್ದೆ. ಸಾಕಷ್ಟು ಸಲ ಬೆಟ್ಟ ಹತ್ತಬೇಕಾದರೆ ರಾಕೇಟ ತರಹ ಹಾರಿ ಗಾಳಿ ಪಟದ ಹಾಗೇ ನೆಲಕ್ಕೆ ಅಪ್ಪಳಿಸಿದ್ದೇನೆ (ಜಾರಿ ನೆಲಕ್ಕೆ ಬಿದ್ದಿದ್ದೇನೆ ಅಂತ ಅರ್ಥ) ಎನ್ನುವಂತಹ ಸನ್ನಿವೇಶಗಳನ್ನು ಹೇಳುತ್ತಾ ಹೋದರೆ ದಿನವೇ ಬೇಕಾಗುತ್ತದೆ. ದಿನ ನಿತ್ಯದ ಕೆಲಸದಿಂದಾಗಿ ಮೈಕಟ್ಟು ಕಲ್ಲಾಗಿ ಹೋಗಿತ್ತು ಎಂತಹ ಬೆಟ್ಟಗಳಾದರು ಸರಿ ಸರಾಗವಾಗಿ ಹತ್ತಿಬಿಡುವಷ್ಟು ಅಧಮ್ಯ ಮನೋಶಕ್ತಿ ಮತ್ತು ಬಲ ನನ್ನಲ್ಲಿ ದುಪ್ಪಟ್ಟಾಗಿ ಬೆಳೆಯುತ್ತಾ ಹೋದಂತೆ ಇಕ್ಕಟ್ಟಾದ, ಕಿರಿದಾದ ಜಾಗಗಳಲ್ಲಿ ನುಸುಳಿಕೊಂಡು ಹೋಗುವಷ್ಟು ನನ್ನ ತೋಳಬಲಗಳಲ್ಲಿ ಶಕ್ತಿ ಸಂಚಾರವಾಗತೊಡಗಿತ್ತು.
ಭದ್ರಾ ಅಭಯಾರಣ್ಯದ ವ್ಯಾಪ್ತಿಯಲ್ಲಿ ಒಂದು ಸಲ ಲೈನವಾಕ್ (ಟ್ರಾನ್ಸ್ಯೆಕ್ಟ್-ಸೀಳುದಾರಿ) ನಡೆಯುವಾಗ ಸಾಕಷ್ಟು ಸಲ ಗಜಪಡೆಯ ದರ್ಶನ ಮಾಡಿದ್ದೇನೆ. ಅಚಾನಕ್ಕಾಗಿ 'ಗಜರಾಜ' ಎದುರಿಗೆ ಬಂದಾಗ ಮೈಯೆಲ್ಲ ಬೆವತು ಹೋಗುವಂತಹ ಘಟನೆಗಳು ಸಾಕಷ್ಟು ಬಾರಿ ನಡೆದಿವೆ. ಬಂಡೀಪುರ ಅಭಯಾರಣ್ಯದಲ್ಲಿ ಬರುವ ಬೇಲದ ಕುಪ್ಪೆಯಲ್ಲಿರುವ ಹುಲಿ ದೇವಸ್ಥಾನದ ಪಕ್ಕದಲ್ಲಿ ಒಂದೊಮ್ಮೆ ಲೈನವಾಕ್ ಅಂತ ಹೋಗಿದ್ದೆ. ಆ ದಿನ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಮತ್ತು ಪ್ರವಾಸಿಗರ ದಟ್ಟಣೆ ಹೆಚ್ಚಾಗಿದ್ದರಿಂದ ವಾಹನಗಳ ಓಡಾಟವು ಸಹ ಹೆಚ್ಚಾಗಿತ್ತು. ಸಾಯಂಕಾಲದ ಸಮಯ ನಾನು ಮತ್ತು ಪುಟ್ಟ (ಕ್ಷೇತ್ರ ಸಹಾಯಕ) ಜೊತೆಗೂಡಿ ಲೈನ್ ನಡೆಯುತ್ತಿದ್ದೇವು. ಲೈನ್ ವಾಕ್ ಇನ್ನೇನು ಮುಗಿಯುವ ಹಂತದಲ್ಲಿ ಬಂದಾಗ ಅದೇ ದಾರಿಯಲ್ಲಿ ಒಂದು ದೊಡ್ಡದಾದ ಆಲದ ಮರವಿತ್ತು ಆ ಆಲದ ಮರದ ಮೇಲೆ ಪುಟ್ಟ ತನ್ನ ಕಣ್ಣುಗಳನ್ನು ನೇರವಾಗಿ ಮಾಡಿ ಅಲ್ಲೇ ನೋಡುತ್ತ ನಿಂತು ಬಿಟ್ಟ. ಆಗ, ನಾನು ಪುಟ್ಟನಿಗೆ ಕೇಳಿದೆ ಯಾಕೋ ಮುಂದೆ ನಡೆಯುತ್ತಿಲ್ಲ? ನಡಿಯೋ ಅಂತ ನಿಧಾನವಾಗಿ ಹೇಳಿದರು ಆ ಆಸ್ಸಾಮ್ಮಿ ಮುಂದೆ ಹೆಜ್ಜೆ ಹಾಕಲು ತಡವರಿಸುತ್ತಿದ್ದ. ಯಾಕೆ? ಈ ತರಹ ವರ್ತಿಸುತ್ತಿದ್ದಾನೆ ಅಂತ ಕೇಳಲು ಆತನ ಭುಜವನ್ನು ಸರಿಸಿ ನೋಡಿದರೆ ಮರದ ಟೊಂಗೆಯ ಮೇಲೆ 'ಹುಲಿರಾಯ' ನಮ್ಮನ್ನೇ ನೋಡುತ್ತಾ ಕುಳಿತು ಬಿಟ್ಟಿದ್ದಾನೆ. ರುದ್ರಾವತಾರದಲ್ಲಿ ಕುಳಿತ ಭಂಗಿಯನ್ನು ನೋಡಿ ನನಗೆ ನನ್ನ ವಂಶಸ್ಥರು ಆ ಸಮಯದಲ್ಲಿ ನೆನಪಿಗೆ ಬಂದಂತಾಯಿತು. ಕಾಲುಗಳೆಲ್ಲ ಗಡಗಡ ನಡುಗಲು ಶುರುಮಾಡಿದವು. ಒಂದು ಕಡೆ ಹುಲಿರಾಯನನ್ನು ನೋಡಿ ಸಂತೋಷ ಪಟ್ಟಷ್ಟು ಅದರ ಸಾವಿರಪಟ್ಟು ಭಯವಾಯಿತು. ಅಷ್ಟರಲ್ಲಿ ನನ್ನ ಮೈಯೆಲ್ಲಾ ಒದ್ದೆಯಾಗಿ ಹೋಗಿತ್ತು, ಪುಟ್ಟ.. ಪುಟ್ಟ.. ಅಂತ ಕರೆಯಲು ಪ್ರಯತ್ನಿಸಿದರು ಬಾಯಿಯಿಂದ ಮಾತುಗಳು ಹೊರಬರಲು ತಡವರಿಸುತ್ತಿದ್ದವು. ಕಣ್ಣುಗಳಲ್ಲಿ ಭಯದ ಛಾಯೆ ಆವರಿಸಿತ್ತು, ಎದೆ ಢವ! ಢವ! ಅಂತ ಜೋರಾಗಿ ಬಡಿದುಕೊಳ್ಳಲು ಶುರುಮಾಡಿತು ಅಂತಹದರಲ್ಲಿ ಮರದ ಮೇಲೆ ಕುಳಿತ ಹುಲಿರಾಯ ಒಮ್ಮೇಲೆ ಕೆಳೆಗೆ 5 ಮೀಟರ ಅಂತರದಲ್ಲಿ ಜಿಗಿದೆ ಬಿಟ್ಟಿತು. ಜಿಗಿದ ರಭಸಕ್ಕೆ ಕೆಳಗೆ ಬಿದ್ದಿದ್ದ ಎಲೆಗಳೆಲ್ಲ ಗಾಳಿಯಲ್ಲಿ ಫಟ್ಟಂತ ತೇಲಾಡ ತೊಡಗಿದವು. ನಿಶಬ್ಧವಾದ ವಾತಾವರಣದಲ್ಲಿ ಅದರ ನೆಗೆತದ ಶಬ್ಧ ಬಲು ಜೋರಾಗಿ ಕೇಳಿಸಿದ್ದರಿಂದ ನನ್ನ ಎದೆ ಬಡಿತ ನಿಂತೆ ಹೋಗಿತ್ತು. ಸ್ವಲ್ಪವು ನಾವು ನಮ್ಮ ಜಾಗದಿಂದ ಕದಲದೆ ಅಲ್ಲೇ ನಿಂತು ನೋಡುವಾಗ, ಕ್ಷಣಾರ್ದದಲ್ಲಿ ಹುಲಿರಾಯ ನಮ್ಮತ್ತ ತಿರುಗಿಯು ನೋಡದೆ ತನ್ನ ಪಾಡಿಗೆ ನಿಧಾನವಾಗಿ ನಡೆಯುತ್ತ ಹುಲ್ಲುಗಾವಲಿನಲ್ಲಿ ಮರೆಯಾಯಿತು. ಬದುಕಿತು ಜೀವ! ಅಂತ ಮನಸ್ಸಿನಲ್ಲಿ ಅಂದುಕೊಳ್ಳುತ್ತಾ ನಾನು ಮತ್ತು ಪುಟ್ಟ ಸ್ವಲ್ಪ ಸಮಯ ಮರದ ಪಕ್ಕದಲ್ಲಿ ನಿಂತು ನಿಟ್ಟುಸಿರು ಬಿಡುತ್ತ ದಣಿವಾರಿಸಿಕೊಂಡು ಅಲ್ಲಿಂದ ಹೊರಟೇವು. ಮೊದಲಬಾರಿಗೆ ಹುಲಿರಾಯನನ್ನು ನೋಡಿದ ಸಂತೋಷದ ವಿಷಯವನ್ನು ಕ್ಯಾಂಪಿಗೆ ಬಂದು ಎಲ್ಲ ಸಹದ್ಯೋಗಿಗಳಿಗೆ ನಡೆದ ಕೂತುಹಲ ಮೂಡಿಸುವಂತಹ ಘಟನೆಯನ್ನು ವಿವರಿಸಿ ಸಂತೋಷ ಪಟ್ಟೇವು.
ಬಂಡೀಪುರ ಅಭಯಾರಣ್ಯ- ಲೈನವಾಕ್ ನಡೆಯುತ್ತಿರುವ ಸಂದರ್ಭದಲ್ಲಿ ಮರದ ಮೇಲೆ ಕುಳಿತ ಹುಲಿರಾಯನ ದೃಶ್ಯ | ಚಿತ್ರ ರಚಿಸಿದವರು - ಕೃಷ್ಣಾ ಸಾತಪೂರೆ, ಇಂಡಿ, ವಿಜಯಪುರ
ಇದೇ ತರಹ ಹಲವಾರು ಘಟನೆಗಳನ್ನ ಮೆಲಕು ಹಾಕುತ್ತ ಸಾಗಿದೆಂತೆಲ್ಲ ಮತ್ತೆ ಮತ್ತೆ ಪರಿಸರದಲ್ಲಿ ತಲ್ಲಿನವಾಗಬೇಕು ಅಂತ ಮನಸ್ಸು ಇವತ್ತಿಗೂ ಹಾತೊರೆಯುತ್ತೆ..
ಉಳಿದ ಭಾಗ ಮುಂದಿನ ಸಂಚಿಕೆಯಲ್ಲಿ ಮುಂದುವರೆಯುವುದು...
Satish G Nagathan, Research Assistant with WCS India shares his experience from his first wild animal sighting of a gaur in Kudremukh National Park to an encounter with a tiger atop a banyan tree in Bandipur Tiger Reserve! From the initial fear to joy and excitement it has been a fruitful tryst with nature with a lot of learning thrown in. Here in recounting parts of the journey, he goes lyrical about nature and its denizens.
Satish joined WCS India four years ago out of passion towards the environment and wildlife. As a researcher he participates in many kinds of wildlife surveys conducted by WCS India.